ಮುಡಾ ನಿವೇಶನ ಹಂಚಿಕೆ ಪ್ರಕರಣ: ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ ಜನವರಿ 2ಕ್ಕೆ ಮುಂದೂಡಿದ ಹೈಕೋರ್ಟ್

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ 2026ರ ಜನವರಿ 8ಕ್ಕೆ ಮುಂದೂಡಿದೆ.
ಏಕಸದಸ್ಯ ನ್ಯಾಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧವಿಲ್ಲದಿದ್ದರೂ ಪ್ರಕರಣದಲ್ಲಿ ತಮ್ಮನ್ನು ಎಳೆದು ತರಲಾಗಿದೆ ಎಂದು ಆಕ್ಷೇಪಿಸಿ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಸಲ್ಲಿಸಿರುವ ಪ್ರತ್ಯೇಕ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸಿದ್ದರಾಮಯ್ಯ ಪರವಾಗಿ ಹಾಜರಾಗಿದ್ದ ವಕೀಲ ಶತಭಿಷ್ ಶಿವಣ್ಣ ಅವರು, ಮೇಲ್ಮನವಿಗಳ ವಿಚಾರಣೆ ಮುಂದೂಡುವುದಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಕಾರರ ನಡುವೆ ಒಪ್ಪಿಗೆ ಇದೆ. ಆದ್ದರಿಂದ, ವಿಚಾರಣೆಯನ್ನು ಜನವರಿಗೆ ಮುಂದೂಡಬೇಕು ಎಂದು ಕೋರಿದರು.
ಆಗ ನ್ಯಾಯಪೀಠ, ನ್ಯಾಯಾಲಯದ ಹಿಂದಿನ ಆದೇಶದ ಅನುಪಾಲನೆ ಮಾಡಬೇಕಿದೆ ಎಂದರು. ಅದನ್ನು ಮಾಡಲಾಗುವುದು ಎಂದು ವಕೀಲರು ಹೇಳಿದರು. ಇದನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿತು.





