ನಿಯಮ ಪಾಲಿಸದ ಪಿಜಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಬಿಎಗೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು: ಸುರಕ್ಷತಾ ಮಾನದಂಡಗಳು ಹಾಗೂ ಕಾನೂನುಬದ್ಧ ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿ.ಜಿ) ವಸತಿಗಳ ವಿರುದ್ಧ ಸೀಲಿಂಗ್ ಸೇರಿದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಇದೇ ವೇಳೆ, ನ್ಯಾಯಾಲಯದ ಮೊರೆ ಹೋಗಿರುವ ಪಿ.ಜಿ ನಿರ್ವಾಹಕರಿಗೆ ನಿಯಮ ಪಾಲನೆಗಾಗಿ ಕೈಗೊಳ್ಳುವ ಕ್ರಮಗಳು ಮತ್ತು ಅವುಗಳನ್ನು ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಲು ನ್ಯಾಯಾಲಯ ಒಂದು ವಾರ ಕಾಲಾವಕಾಶ ನೀಡಿದೆ. ಜತೆಗೆ, ನವೆಂಬರ್ 4ಕ್ಕೆ ಅನುಪಾಲನಾ ವರದಿ ಸಲ್ಲಿಸಲು ಜಿಬಿಎಗೆ ಸೂಚಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಬೆಳವಣಿಗೆಯನ್ನು ಬೆಂಗಳೂರಿನ ಎಲ್ಲ ಪಿ.ಜಿಗಳನ್ನು ತಕ್ಷಣ ಮುಚ್ಚುವ ಸಾಮೂಹಿಕ ಆದೇಶವೆಂದು ಅರ್ಥೈಸುವಂತಿಲ್ಲ. ವಿಚಾರಣೆಯಲ್ಲಿ ಕೇವಲ ನಾಲ್ಕು ಪಿಜಿಗಳು ಅರ್ಜಿದಾರರಾಗಿದ್ದು, ಪಿ.ಜಿ ಮಾಲೀಕರ ಸಂಘವು ಈ ಅರ್ಜಿಗಳಲ್ಲಿ ಪಕ್ಷಕಾರರಲ್ಲ. ಆ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಪಕ್ಷಕಾರರಲ್ಲದ, ನಿಯಮ ಉಲ್ಲಂಘಿಸುತ್ತಿರುವ ಪಿ.ಜಿಗಳ ವಿರುದ್ಧ ಜಿಬಿಎ ಮತ್ತು ಅದರ ವ್ಯಾಪ್ತಿಯ ನಗರ ಪಾಲಿಕೆಗಳು ಕ್ರಮ ಕೈಗೊಳ್ಳಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪಿ.ಜಿ ನಿರ್ವಾಹಕರು ವಾಸ್ತವಿಕವಾಗಿ ಆದೇಶ ಪಾಲನೆ ವೇಳಾಪಟ್ಟಿ ಸಲ್ಲಿಸಬೇಕು. ಸಮಂಜಸವಾದ ವೇಳಾಪಟ್ಟಿ ನೀಡಿದರೆ, ಆ ಅವಧಿವರೆಗೆ ಕ್ರಮ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸುವ ವಿಚಾರವನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆಯಾದರೂ, ಪ್ರಮಾಣಪತ್ರ ಸಲ್ಲಿಸಲು ನೀಡಿರುವ ಅವಕಾಶವನ್ನು ಎಲ್ಲ ಪಿ.ಜಿಗಳಿಗೂ ದೊರೆತಿರುವ ಸಾರ್ವತ್ರಿಕ ರಕ್ಷಣೆಯೆಂದು ಪರಿಗಣಿಸಲಾಗದು ಎಂದೂ ಸ್ವಷ್ಟವಾಗಿ ಹೇಳಿದೆ.
ಈಗಾಗಲೇ ಸಾಕಷ್ಟು ಅವಕಾಶ ನೀಡಿದ್ದರೂ ಲೋಪಗಳನ್ನು ಸರಿಪಡಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಪಿ.ಜಿಗಳನ್ನು ಏಕಾಏಕಿ ಸೀಲ್ ಮಾಡಿದರೆ ಅಲ್ಲಿ ವಾಸಿಸುವ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಇತರ ನಿವಾಸಿಗಳಿಗೆ ವಸತಿ ಸಮಸ್ಯೆ ಉಂಟಾಗಬಹುದು. ಉದ್ಯೋಗಿಗಳ ಮೇಲೆ ಅವಲಂಬಿತವಾಗಿರುವ ಸಂಸ್ಥೆಗಳು ಮತ್ತು ವ್ಯವಹಾರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕಾರಣದಿಂದಲೇ ನ್ಯಾಯಾಲಯ ಇದುವರೆಗೆ ಸಂಯಮ ತೋರಿಸಿದೆ ಎಂದು ಹೇಳಿದೆ.
ಆದರೆ, ಬೆಂಗಳೂರಿಗೆ ಪಿ.ಜಿ ವಸತಿಗಳು ಅಗತ್ಯ ಇವೆ ಎಂಬ ಕಾರಣದಿಂದ ಸುರಕ್ಷತಾ ಲೋಪಗಳನ್ನು ಸಹಿಸಲಾಗದು. ನಿರ್ವಾಹಕರು ಲೋಪಗಳನ್ನು ಸರಿಪಡಿಸದಿದ್ದರೆ ಅವರಷ್ಟೇ ಅಲ್ಲ, ಅಲ್ಲಿ ವಾಸಿಸುವವರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದೂ ನ್ಯಾಯಪೀಠ ತಿಳಿಸಿದೆ.
ಶೇ.50ರಷ್ಟು ನಿಯಮ ಉಲ್ಲಂಘನೆ :
ಜಿಬಿಎ ಪರ ವಕೀಲರು ಹಿಂದಿನ ವಿಚಾರಣೆ ವೇಳೆ, ಬೆಂಗಳೂರಿನಲ್ಲಿ ಅಂದಾಜು ಶೇ. 50 ಪ್ರಮಾಣದ ಪಿ.ಜಿಗಳು ನಿಯಮಗಳನ್ನು ಪಾಲಿಸದೆ, ಅಕ್ರಮವಾಗಿ ಅಥವಾ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ನಿಯಮ ಪಾಲಿಸದ ಕಟ್ಟಡಗಳಿಗೆ ಸೇವೆಗಳನ್ನು ಕಡಿತಗೊಳಿಸಲು ಹಾಗೂ ಪಿ.ಜಿಗಳನ್ನು ಸೀಲ್ ಮಾಡಲು ಅಧಿಕಾರಿಗಳು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ವಿವಿಧ ವಲಯಗಳಲ್ಲಿ ಪೊಲೀಸ್ ನೆರವಿನೊಂದಿಗೆ ಕ್ರಮ ಕೈಗೊಳ್ಳಲು ಸಿಬ್ಬಂದಿ ಲಭ್ಯವಿರುವ ಅಂಶವೂ ವಿಚಾರಣೆಯಲ್ಲಿ ಪ್ರಸ್ತಾಪವಾಗಿದೆ. ನಿಯಮ ಉಲ್ಲಂಘಿಸುವ ಪಿ.ಜಿಗಳಿಗೆ ನೋಟಿಸ್ ನೀಡಲು ಕಾನೂನು ಘಟಕ ಸಿದ್ಧತೆ ನಡೆಸುತ್ತಿದೆ. ಉದ್ದೇಶಿತ ಕ್ರಮದ ವಿರುದ್ಧ ಏಕಪಕ್ಷೀಯ ಮಧ್ಯಂತರ ಆದೇಶ ನೀಡದಂತೆ ಸಂಬಂಧಿತ ಸಿವಿಲ್ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸುವುದಾಗಿಯೂ ಜಿಬಿಎ ತಿಳಿಸಿದೆ.
ಭದ್ರತಾ ವ್ಯವಸ್ಥೆ, ಸಿಸಿ ಕ್ಯಾಮರಾಗಳು, ಅಗ್ನಿಸುರಕ್ಷತಾ ಉಪಕರಣಗಳು, ಸುರಕ್ಷಿತ ಆಹಾರ ಹಾಗೂ ನೀರಿನ ವ್ಯವಸ್ಥೆಯಲ್ಲಿನ ಲೋಪಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕೆಂಬುದು ನ್ಯಾಯಾಲಯದ ನಿರ್ದೇಶನದ ಪ್ರಮುಖ ಅಂಶ. ಇತರ ಅಗತ್ಯಗಳ ಪಾಲನೆಗೂ ಸಮಂಜಸ ಕಾಲಮಿತಿ ನಿಗದಿಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ನಿಯಮ ಜಾರಿ ಹೊಣೆ ಪಿ.ಜಿ ನಿರ್ವಾಹಕರಿಗೆ ಮಾತ್ರ ಸೀಮಿತವಾಗಿಲ್ಲ. ಜಿಬಿಎ, ಅಗ್ನಿಶಾಮಕ, ಆರೋಗ್ಯ, ಆಹಾರ ಸುರಕ್ಷತಾ ಇಲಾಖೆಗಳು ಮತ್ತು ಪೊಲೀಸರು ಉಲ್ಲಂಘನೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇದ್ದು, ಅಲ್ಲಿ ದುರ್ಘಟನೆ ಸಂಭವಿಸಿದರೆ ಅವರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿಸಲಾಗುವುದು ಎಂದು ಹಿಂದಿನ ಆದೇಶದಲ್ಲಿ ನ್ಯಾಯಾಲಯ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.






