ಪ್ರದೂಷ್ ರಾವ್ ಮಾಫಿ ಸಾಕ್ಷಿ; ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್

ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೂಷ್ ರಾವ್ (ಎ14) ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ನಟ ದರ್ಶನ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ವಿಚಾರಣಾ ನ್ಯಾಯಾಲಯ ಸೆಪ್ಟೆಂಬರ್ 16ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿಯಲ್ಲೇನಿದೆ?
ಜೈಲಿನಲ್ಲಿ ಬೇರೊಬ್ಬ ಕೈದಿಯ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ ಮೊಬೈಲ್ ಸಂಖ್ಯೆ ಬಳಸಿ ಮಾತನಾಡಿದ ಆರೋಪದಲ್ಲಿ ಪ್ರದೂಷ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಅಪರಾಧ ಪ್ರಕರಣ) ದಾಖಲಾಗಿದೆ. ಜೈಲಿನಲ್ಲಿ ಆತ ರಹಸ್ಯವಾಗಿ ಮೊಬೈಲ್ ಫೋನ್ ಬಳಸುತ್ತಿದ್ದಾನೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್ ಬಗ್ಗೆ ಅನೇಕ ವ್ಯಕ್ತಿಗಳು ಅತಿಯಾದ ಆಕ್ರೋಶ, ದ್ವೇಷ ಹೊಂದಿದ್ದಾರೆ. ಪ್ರತಿಸ್ಪರ್ಧಿಗಳು-ವಿರೋಧಿಗಳು ಸೇರಿ ಅನೇಕರು ದರ್ಶನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸ್ವಾರ್ಥಕ್ಕಾಗಿ, ಬೇರೆಯವರ ಚಿತಾವಣೆಯಿಂದ ಹಾಗೂ ದರ್ಶನ್ ವಿರೋಧಿಗಳ ಪ್ರಭಾವದಿಂದ ಪ್ರದೂಷ್ ಮಾಫಿ ಸಾಕ್ಷಿಯಾಗಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರೇಣುಕಸ್ವಾಮಿ ಕೊಲೆ 2024ರ ಜೂನ್‌ನಲ್ಲಿ ನಡೆದಿದೆ. ಅದಾಗಿ ಎರಡು ವರ್ಷಗಳ ನಂತರ ಮಾಫಿ ಸಾಕ್ಷಿಯಾಗಲು ಪ್ರದೂಷ್ ಅರ್ಜಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಅನಧಿಕೃತ ಮೊಬೈಲ್ ಬಳಸಿ ಪ್ರದೂಷ್ ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದರು. ಅಪ್ರೂವರ್ ಆಗಲು ಈ ಮೊಬೈಲ್ ಬಳಸಿದ್ದಾರೆಂಬ ಶಂಕೆಯಿದೆ. ಆ ಕುರಿತು ದಾಖಲಾಗಿರುವ ಎನ್‌ಸಿಆರ್ ಕುರಿತ ತನಿಖೆ ಪೂರ್ಣಗೊಳ್ಳಬೇಕಿದೆ. ಪ್ರದೂಷ್ ಯಾರ ಸಂಪರ್ಕದಲ್ಲಿದ್ದರು ಹಾಗೂ ಆತ ಯಾರ ಪ್ರಭಾವಕ್ಕೆ ಒಳಗಾಗಿದ್ದಾರೆ. ಆತನ ಪತ್ನಿಗೆ ಯಾರು ಪ್ರಭಾವ ಬೀರಿದ್ದಾರೆ ಎನ್ನುವ ವಿಷಯ ಮುಖ್ಯವಾಗುತ್ತದೆ. ಆ ಪ್ರಕರಣದ ತನಿಖೆ ಪೂರ್ಣಗೊಳ್ಳೂವರೆಗೂ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸದಂತೆ ಸಲ್ಲಿಸಿದ್ದ ಮೆಮೊ ಅನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ದರ್ಶನ್ ಅರ್ಜಿಯಲ್ಲಿ ಕೋರಿದ್ದಾರೆ.






