ಮಕ್ಕಳಿಗೆ ಹೆಲ್ಮೆಟ್, ಸುರಕ್ಷತಾ ಪರಿಕರಗಳ ನಿಯಮ ಜಾರಿಗೆ ಕ್ರಮ ಕೈಗೊಳ್ಳಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿ ನಿಗದಿಪಡಿಸುವ ಹಾಗೂ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138(7)ರ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕೇಂದ್ರ ಮೋಟಾರು ವಾಹನ (ಸಿಎಂವಿ) ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಮಕ್ಕಳ ಹೆಲ್ಮೆಟ್ಗಳು ಮತ್ತು ಸುರಕ್ಷತಾ ಪರಿಕರಗಳ ಲಭ್ಯತೆಗೆ ತುರ್ತು ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಶಿವಮೊಗ್ಗದ ಡಾ. ಅರ್ಚನಾ ಭಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸಿಎಂವಿ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ವಾಸ್ತವವಾಗಿ ಈ ನಿಯಮವನ್ನು ಇನ್ನೂ ಜಾರಿಗೆ ತರಲಾಗಿಲ್ಲ. ಆದ್ದರಿಂದ, ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶಿಸಿ, ಪಿಐಎಲ್ ಇತ್ಯರ್ಥಪಡಿಸಿದೆ.
ಇದಕ್ಕೂ ಮುನ್ನ ಸರಕಾರದ ಪರ ವಕೀಲರು ವಾದ ಮಂಡಿಸಿ, ಮಕ್ಕಳ ಸುರಕ್ಷತೆ, ಸುರಕ್ಷತಾ ಪರಿಕರಗಳು ಹಾಗೂ ಕ್ರ್ಯಾಶ್ ಹೆಲ್ಮೆಟ್ಗಳ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ಮಕ್ಕಳ ಹೆಲ್ಮೆಟ್ಗಳು ಹಾಗೂ ಸುರಕ್ಷತಾ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಅಧ್ಯಕ್ಷತೆಯಲ್ಲಿ ಮೋಟಾರು ಸೈಕಲ್ ತಯಾರಕರು ಹಾಗೂ ಹೆಲ್ಮೆಟ್ ತಯಾರಕರೊಂದಿಗೆ ಸಭೆ ನಡೆಸಲಾಗಿದೆ. ಸುರಕ್ಷತಾ ಪರಿಕರಗಳು ಹಾಗೂ ಹೆಲ್ಮೆಟ್ಗಳ ತಯಾರಿಕೆಯು ಸಂಶೋಧನೆ ಮತ್ತು ಅಭಿವೃದ್ಧಿ ಹಂತದಲ್ಲಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಪರಿಚಯಿಸುವ ಮುನ್ನ ಪರೀಕ್ಷೆಗೊಳಪಡಿಸಬೇಕಿದೆ. ಅದಕ್ಕಾಗಿ ಅಂದಾಜು ಐದರಿಂದ ಆರು ತಿಂಗಳು ಬೇಕಾಗುತ್ತದೆ ಎಂದು ತಯಾರಕರು ತಿಳಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಸದ್ಯ ಸುರಕ್ಷತಾ ಉಪಕರಣಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ ಹಾಗೂ ಅವುಗಳು ಸಂಶೋಧನಾ ಹಂತದಲ್ಲಿವೆ ಎಂದು ಸರಕಾರ ಹೇಳಿದೆ. ಆದ್ದರಿಂದ, ಸುರಕ್ಷತಾ ಪರಿಕರಗಳ ಲಭ್ಯತೆ ಖಾತ್ರಿಪಡಿಸಿಕೊಂಡು ಸಾಧ್ಯವಾದಷ್ಟು ಶೀಘ್ರವಾಗಿ ಆರು ತಿಂಗಳೊಳಗೆ ನಿಯಮಗಳ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತು.
ನಿಯಮದಲ್ಲೇನಿದೆ?
ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138(7) ಪ್ರಕಾರ, 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೋಟಾರು ಸೈಕಲ್ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣಿಸುವಾಗ ಮಗುವನ್ನು ಚಾಲಕನೊಂದಿಗೆ ಜೋಡಿಸಲು ಸುರಕ್ಷತಾ ಪರಿಕರ ಹಾಗೂ ಕ್ರ್ಯಾಶ್ ಹೆಲ್ಮೆಟ್ ಬಳಸಬೇಕು. ಜತೆಗೆ, 4 ವರ್ಷದವರೆಗಿನ ಮಕ್ಕಳನ್ನು ಹಿಂಬದಿ ಸವಾರರಾಗಿ ಸಾಗಿಸುವ ಮೋಟಾರ್ ಸೈಕಲ್ನ ವೇಗವು ಗಂಟೆಗೆ 40 ಕಿ.ಮೀ. ಗಿಂತ ಹೆಚ್ಚಿರಬಾರದು ಎಂದು ಹೇಳಲಾಗಿದೆ.







