ವೈದ್ಯರ ಮೇಲೆ ಹಲ್ಲೆ; ಪ್ರಕರಣ ರದ್ದು ಕೋರಿ ಅನಂತಕುಮಾರ್ ಹೆಗಡೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಅನಂತಕುಮಾರ್ ಹೆಗಡೆ
ಬೆಂಗಳೂರು : ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅನಂತಕುಮಾರ್ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ, ಪ್ರಕರಣದ ವಿಚಾರಣೆಗೆ ತಡೆ ನೀಡಿ ಈ ಹಿಂದೆ ಹೊರಡಿಸಲಾಗಿದ್ದ ಮಧ್ಯಂತರ ಆದೇಶವೂ ತೆರವುಗೊಂಡಂತಾಗಿದ್ದು, ಅನಂತಕುಮಾರ್ ಹೆಗಡೆಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯೂ ಮಾರ್ಕೆಟ್ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅನಂತಕುಮಾರ್ ಹೆಗಡೆ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.
ಈ ವೇಳೆ ನ್ಯಾಯಮೂರ್ತಿಗಳು, "ಯಾರೂ ಹಾಜರಾಗದಿದ್ದರೆ ನಾನು ಅರ್ಜಿಯನ್ನು ವಜಾಗೊಳಿಸುತ್ತೇನೆ” ಎಂದರು. ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ನಮಗೆ ಅರ್ಜಿಯ ಪ್ರತಿ ನೀಡಲು ನಿರ್ದಿಷ್ಟವಾಗಿ ಸೂಚಿಸಿದ್ದರೂ ಈವರೆಗೂ ಪ್ರತಿಯನ್ನು ನೀಡಿಲ್ಲ ಎಂದರು.
ವಿಚಾರಣೆಗೆ ಹಾಜರಾಗದ ವಕೀಲರು, ಅರ್ಜಿ ವಜಾ;
ಪ್ರಕರಣದ ತನಿಖೆಗೆ ತಡೆ ನೀಡಿ 2017ರ ಸೆಪ್ಟೆಂಬರ್ 20ರಂದು ಮಧ್ಯಂತರ ಆದೇಶ ಮಾಡಲಾಗಿದ್ದು, ಆನಂತರ ಅದನ್ನು ಹಲವು ಬಾರಿ ವಿಸ್ತರಿಸಲಾಗಿದೆ. 2024ರ ಆಗಸ್ಟ್ 29ರಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಅರ್ಜಿದಾರರಿಗೆ ಕೊನೆಯ ಬಾರಿ ಅವಕಾಶ ನೀಡಿ ಆದೇಶಿಸಿತ್ತು. ಆನಂತರವೂ ಹಲವು ಬಾರಿ ಮಧ್ಯಂತರ ಆದೇಶ ವಿಸ್ತರಿಸಲಾಗಿದೆ. 2025ರ ಮಾರ್ಚ್ 6 ಹಾಗೂ ಏಪ್ರಿಲ್ 7ರಂದೂ ಇದು ಪುನರಾವರ್ತನೆಯಾಗಿದೆ. ಜುಲೈ 30ರ ವಿಚಾರಣೆಯಂದೂ ಅರ್ಜಿದಾರ ಹೆಗಡೆ ಪರವಾಗಿ ಯಾರೂ ಹಾಜರಾಗಿಲ್ಲ. ವಿಚಾರಣೆಯ ಪ್ರಕ್ರಿಯೆಗಳಲ್ಲಿ ಶ್ರದ್ಧೆಯ ಕೊರತೆ ಇದೆ ಎಂಬುದು ಹಿಂದಿನ ಹಲವು ಆದೇಶಗಳಿಂದ ತಿಳಿದು ಬಂದಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶ ಮಾಡಿದೆ.
ಪ್ರಕರಣವೇನು?
ಅನಂತಕುಮಾರ್ ಹೆಗಡೆ ಸಹೋದರನಾದ ಈಶ್ವರ ಎಸಳೆ (ಎರಡನೇ ಆರೋಪಿ) ಅವರು 2017ರ ಜನವರಿ 2ರಂದು ಸಂಜೆ 7 ಗಂಟೆ ವೇಳೆಗೆ ತಮ್ಮ ತಾಯಿ ಲಲಿತಾ ಹೆಗಡೆ ಅವರನ್ನು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಲಲಿತಾ ಅವರನ್ನು ಸ್ಟ್ರೆಚರ್ನಲ್ಲಿ ಪರಿಶೀಲಿಸಿದ್ದ ವೈದ್ಯ ಮಧುಕೇಶ್ವರ ಹೆಗಡೆ ಅವರು ಎಡ ತೊಡೆಯ ಸಂಧಿನಲ್ಲಿ ಮೂಳೆ ಮುರಿತವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ತಿಳಿಸಿದ್ದರು. ಈ ಕುರಿತು ಕುಟುಂಬದ ವೈದ್ಯರಲ್ಲಿ ವಿಚಾರಿಸಿ ಬರುವುದಾಗಿ ಈಶ್ವರ್ ತೆರಳಿದ್ದರು.
ಅರ್ಧ ಗಂಟೆಯಾದರೂ ಈಶ್ವರ ಅವರು ಮರಳಿರಲಿಲ್ಲ. ಈ ನಡುವೆ ವೈದ್ಯ ಮಧುಕೇಶ್ವರ ಹೆಗಡೆ ಅವರು ಮತ್ತೊಮ್ಮೆ ಪರಿಶೀಲಿಸಿ ಬಂದಿದ್ದರು. ಆನಂತರ, ಲಲಿತಾ ಅವರನ್ನು ಮಂಗಳೂರಿಗೆ ಕರೆದೊಯ್ಯುವುದಾಗಿ ಈಶ್ವರ್ ಅವರು ತಿಳಿಸಿದ್ದು, ಕರ್ತವ್ಯನಿರತ ವೈದ್ಯರಿಗೆ ನೋವಿನ ಶಮನಕ್ಕೆ ಇಂಜೆಕ್ಷನ್ ನೀಡುವಂತೆ ಸೂಚಿಸಿ ಮಧುಕೇಶ್ವರ್ ಅವರು ಮನೆಗೆ ತೆರಳಿದ್ದರು. ಈ ಮಧ್ಯೆ, ರಾತ್ರಿ ಸುಮಾರು 10 ಗಂಟೆಗೆ ಆಸ್ಪತ್ರೆಗೆ ಬಂದಿದ್ದ ಅನಂತ ಕುಮಾರ್ ಹೆಗಡೆ ಮತ್ತು ಅವರ ಸಹೋದರ ಈಶ್ವರ್ ಅವರು ಡಾ.ಮಧುಕೇಶ್ವರ್ ಅವರನ್ನು ಆಸ್ಪತ್ರೆಗೆ ಕರೆಯಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದರು.
ಆಸ್ಪತ್ರೆ ಸಿಬ್ಬಂದಿ ಬಾಲಚಂದ್ರ ಭಟ್ಟ, ರಾಹುಲ್ ಮಾಶಲೇಕರ್ ಅವರಿಗೆ ಈಶ್ವರ್ ಥಳಿಸಿದ್ದರು. ಆದರೆ, ಈ ಸಂಬಂಧ ಮಾಹಿತಿ ನೀಡಿದ್ದ ಸಿಬ್ಬಂದಿಯು ದೂರು ನೀಡಲು ಮುಂದಾಗಿರಲಿಲ್ಲ. ಈ ಘಟನೆಯು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜನವರಿ 3ರಂದು ಆಸ್ಪತ್ರೆಯ ಸಿಸಿಟಿವಿ ವಿಡಿಯೊ ತುಣುಕುಗಳನ್ನು ಪರಿಶೀಲಿಸಿ, ಪೊಲೀಸ್ ಅಧಿಕಾರಿ ರಘು ಕನಾಡೆ ನೀಡಿದ ದೂರಿನ ಅನ್ವಯ ಶಿರಸಿ ನ್ಯೂ ಮಾರ್ಕೆಟ್ ಠಾಣೆಯಲ್ಲಿ ಜನವರಿ 5ರಂದು ಅನಂತಕುಮಾರ್ ಹೆಗಡೆ ಮತ್ತು ಈಶ್ವರ್ ಎಸಳೆ ವಿರುದ್ಧ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರ ಹಾಗೂ ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ನಿಷೇಧ ಕಾಯ್ದೆ ಸೆಕ್ಷನ್ 4 ಹಾಗೂ ಐಪಿಸಿ ಸೆಕ್ಷನ್ಗಳಾದ 506, 341, 34, 323 ಅಡಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣ ರದ್ದು ಕೋರಿ ಹೆಗಡೆ ಹೈಕೋರ್ಟ್ ಮೆಟ್ಟಿಲೇರಿದ್ದರು.







