ಎಚ್‌ಎಂಟಿ ಭೂಮಿ ವಶಪಡಿಸಿಕೊಳ್ಳದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ಬಂಧ

ಬೆಂಗಳೂರು: ನಗರದ ಜಾಲಹಳ್ಳಿಯಲ್ಲಿ ಹಿಂದುಸ್ತಾನ್ ಮಷೀನ್ ಟೂಲ್ಸ್ (ಎಚ್‌ಎಂಟಿ) ಲಿಮಿಟೆಡ್‌ಗೆ ಸೇರಿದ 430 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳದಂತೆ ರಾಜ್ಯ ಸರಕಾರಕ್ಕೆ ನಿರ್ಬಂಧ ವಿಧಿಸಿರುವ ಹೈಕೋರ್ಟ್, ವಿವಾದಿತ ಸ್ಥಳದಲ್ಲಿ ಯಾವುದೇ ಮರಗಳನ್ನು ಕತ್ತರಿಸಬಾರದು ಅಥವಾ ವಿವಾದಿತ ಆಸ್ತಿಯ ಮೇಲೆ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸಬಾರದು ಎಂದು ಎಚ್‌ಎಂಟಿಗೆ ನಿರ್ದೇಶಿಸಿದೆ.
ಭೂಮಿಯನ್ನು 30 ದಿನಗಳಲ್ಲಿ ಹಸ್ತಾಂತರಿಸುವಂತೆ ಸೂಚಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ 2026ರ ಜೂನ್ 15ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಎಚ್‌ಎಂಟಿ ಲಿಮಿಟೆಡ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ಜತೆಗೆ, ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ, ಕಂದಾಯ ಇಲಾಖೆ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಎಚ್‌ಎಂಟಿ ಪರ ವಕೀಲರು, ವಿವಾದಿತ ಭೂಮಿ ಹೊರತುಪಡಿಸಿ ಉಳಿದ ಭೂಮಿಯನ್ನು ಸಂಸ್ಥೆ ಪರಭಾರೆ ಮಾಡುವುದಿಲ್ಲವೆಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಲಾಗುವುದು ಎಂದು ತಿಳಿಸಿದರು. ಆ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಎಚ್‌ಎಂಟಿ ಉಳಿದ ಭೂಮಿಯ ಮಾರಾಟ, ಗುತ್ತಿಗೆ, ಪರವಾನಗಿ, ಅಡಮಾನ ಅಥವಾ ಇತರ ಯಾವುದೇ ರೀತಿಯಲ್ಲಿ ಬದಲಾಯಿಸುವಂತಿಲ್ಲ ಎಂದು ಹೇಳಿತಲ್ಲದೆ, ಮುಂದಿನ ವಿಚಾರಣೆಯವರೆಗೆ ಹಾಲಿ ಸ್ವಾಧೀನದಲ್ಲಿರುವ ಎಚ್‌ಎಂಟಿಯನ್ನು ತೆರವುಗೊಳಿಸಬಾರದು ಎಂದು ಸರಕಾರವನ್ನು ನಿರ್ಬಂಧಿಸಿತು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ರೋಣ ಅವರು, ಎಚ್‌ಎಂಟಿಯನ್ನು ಮರಗಳನ್ನು ಕಡಿಯದಂತೆ ನಿರ್ಬಂಧಿಸಬೇಕೆಂದು ಮನವಿ ಮಾಡಿದರು. ಆಗ ನ್ಯಾಯಾಲಯವು, ಅರ್ಜಿದಾರರು ಮುಂದಿನ ವಿಚಾರಣೆಯ ದಿನಾಂಕದವರೆಗೆ ವಿವಾದಿತ ಭೂಮಿಯಲ್ಲಿರುವ ಯಾವುದೇ ಮರಗಳನ್ನು ಕಡಿಯದಂತೆ ನಿರ್ಬಂಧಿಸಲಾಗಿದೆ ಎಂದು ಹೇಳಿತು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ಮುಂದೆ ಪ್ರಶ್ನಿಸಿರುವ ಆದೇಶವು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರಕಾರದ ನಿಲುವಿಗೆ ವಿರುದ್ಧವಾಗಿದೆ. ರಾಜ್ಯ ಸರಕಾರ ಈ ಹಿಂದೆ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ನಂತರ ಅದನ್ನು ಹಿಂಪಡೆಯಲು ಪ್ರಯತ್ನಿಸಿದೆ. ಈ ಮಧ್ಯೆ, ಭೂಮಿ ಡಿನೋಟಿಫೈ ಮಾಡಲು ರಾಜ್ಯಕ್ಕೆ ನಿರ್ದೇಶನಗಳನ್ನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಮಾರು 178 ಎಕರೆಗಳನ್ನು ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತಿತರರಿಗೆ ಮಾರಾಟ ಮಾಡಲಾಗಿದೆ. ಆದರೆ, ಇದನ್ನು ದಾಖಲೆ ಸಹಿತ ಸಲ್ಲಿಸಿದ್ದರೂ ಸಹ ಉಪ ಸಂರಕ್ಷ ಣಾಧಿಕಾರಿ ಸಂಪೂರ್ಣ ವಿಸ್ತೀರ್ಣದ ಭೂಮಿ ಲಭ್ಯವಿದೆ ಎಂದು ಆದೇಶದಲ್ಲಿ ಹೇಳಿದ್ದಾರೆಂದು ವಿವರಿಸಿದರು.
ಸರಕಾರದ ಪರ ವಕೀಲರು, ರಾಜ್ಯ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ತನ್ನ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಮೂಲ ಭೂಮಿಯ ಗಣನೀಯ ಭಾಗವನ್ನು ಈಗಾಗಲೇ ವರ್ಗಾಯಿಸಲಾಗಿದ್ದರೂ, ಸುಮಾರು 290 ಎಕರೆಗಳು ಗಮನಾರ್ಹ ಹಸಿರು ಹೊದಿಕೆಯೊಂದಿಗೆ ಖಾಲಿಯಾಗಿ ಉಳಿದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.






