ಮುಂದಿನ ವಿಚಾರಣೆಯವರೆಗೆ ಮಹೇಶ್ ಜೋಶಿ ವಿರುದ್ಧ ಕೈಗೊಳ್ಳುವ ಯಾವುದೇ ನಿರ್ಧಾರ ಜಾರಿ ಬೇಡ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ತಳೆಯುವ ಯಾವುದೇ ನಿಲುವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕಸಾಪದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಜಾರಿ ಮಾಡಿರುವ ಶೋಕಾಸ್ ನೋಟಿಸ್ ಪ್ರಶ್ನಿಸಿ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಎಲ್ಲ ವಿಚಾರಗಳನ್ನು ಪರಿಗಣಿಸಲಾಗಿದ್ದು, ಅರ್ಜಿಯ ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ವಿರುದ್ದ ಕ್ರಮ ಕೈಗೊಳ್ಳುವ ಕುರಿತ ಯಾವುದೇ ನಿಲುವನ್ನು ಜಾರಿಗೊಳಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಮೇಲ್ನೋಟಕ್ಕೆ ಆಡಳಿತಾಧಿಕಾರಿಯು ಶೋಕಾಸ್ ನೋಟಿಸ್ ನೀಡುವ ಅಧಿಕಾರ ವ್ಯಾಪ್ತಿ ಹೊಂದಿರುವುದನ್ನು ಸಮರ್ಥಸಿದ್ದಾರೆಯೇ ಎಂಬ ಪ್ರಶ್ನೆ ಇದೆ. ಇದರ ಬಗ್ಗೆ ಪಕ್ಷಕಾರರ ವಾದ ಆಲಿಸಿ ನಿರ್ಧರಿಸಲಾಗುವುದು ಎಂದೂ ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ, ಮಹೇಶ್ ಜೋಶಿ ಅವರು ಆಡಳಿತಾಧಿಕಾರಿಯ ಶೋಕಾಸ್ ನೋಟಿಸ್‌ಗೆ ಉತ್ತರಿಸಬೇಕಿದೆ. ಈಗಾಗಲೇ ಪ್ರತಿಕ್ರಿಯೆ ಸಲ್ಲಿಸುವ ಕಾಲಾವಧಿ ಮುಗಿದಿದ್ದರೂ ಸಕಾರಣವಾದ ಸಮಯವನ್ನು ಜೋಶಿ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ನೀಡಬೇಕಿದ್ದು, ಮಾರ್ಚ್ 2ರ ಒಳಗೆ ಜೋಶಿ ಅವರು ಶೋಕಾಸ್ ನೋಟಿಸ್‌ಗೆ ಉತ್ತರಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 6ಕ್ಕೆ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಮಹೇಶ್ ಜೋಶಿ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ವಾದ ಮಂಡಿಸಿ, ಪರಿಷತ್‌ನ ಪದಾಧಿಕಾರಿಗಳ ವಿರುದ್ಧ ದಂಡನೀಯ ಕ್ರಮಕೈಗೊಳ್ಳುವ ಅಧಿಕಾರವನ್ನು ಆಡಳಿತಾಧಿಕಾರಿ ಹೊಂದಿಲ್ಲ ಎಂದರು.
ಆಡಳಿತಾಧಿಕಾರಿಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಸಹಕಾರ ಸಂಘಗಳ ನಿಬಂಧಕರನ್ನು ಪ್ರತಿವಾದಿ ಮಾಡಿಲ್ಲವಾದ್ದರಿಂದ ಅರ್ಜಿಯು ಊರ್ಜಿತವಾಗುವುದಿಲ್ಲ. ಆಡಳಿತಾಧಿಕಾರಿಯ ಅವಧಿಯು 2025ರ ಡಿಸೆಂಬರ್ 29 ಅಥವಾ ವರದಿ ಆಧರಿಸಿ ಕ್ರಮಕೈಗೊಳ್ಳುವವರೆಗೆ ಇದೆ. ಸಕ್ಷಮ ಪ್ರಾಧಿಕಾರವು ಸಲ್ಲಿಸುವ ವರದಿಯು ಈ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿದೆ. ಆದ್ದರಿಂದ, ಆಡಳತಾಧಿಕಾರಿಯ ವ್ಯಾಪ್ತಿಯನ್ನು ಪ್ರಶ್ನಿಸಲಾಗದು. ಕಸಾಪದಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ದುರುಪಯೋಗವಾಗಿರುವ ಹಣವನ್ನು ಜೋಶಿ ಅವರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದರು.






