ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಗೆ ನಿರ್ದೇಶನ ಕೋರಿ ಅರ್ಜಿ : ರಾಜ್ಯ ಸರಕಾರ, ಕೆಪಿಎಸ್‌ಸಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಕರ್ನಾಟಕ ಆಡಳಿತಾತ್ಮ ಸೇವೆಗಳ ಆಯ್ಕೆಗೆ ಮತ್ತೊಂದು ಬಾರಿ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ಸರಕಾರ ಮತ್ತು ಕೆಪಿಎಸ್‌ಸಿಗೆ ನೋಟಿಸ್ ಜಾರಿಗೊಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಳೆದ ವರ್ಷ 2024ರ ಆಗಸ್ಟ್ 8ರಂದು ನಡೆದಿದ್ದ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯಲ್ಲಿ ಕನ್ನಡ ಭಾಷಾ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಹಲವು ತಪ್ಪುಗಳಿದ್ದವು. ಭಾಷಾಂತರ ಮಾಡುವಲ್ಲಿ ಯಡವಟ್ಟಾಗಿತ್ತು.
ಹೀಗಾಗಿ 2024ರ ಡಿ.29ರಂದು ಕನ್ನಡ ಭಾಷೆಯ ಪೂರ್ವಭಾವಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಾಗಿತ್ತು. ಆದರೆ, ಈ ಪರೀಕ್ಷೆಯಲ್ಲಿಯೂ ಕನ್ನಡ ಪತ್ರಿಕೆಯಲ್ಲಿ ಹಲವು ದೋಷಗಳು ಕಂಡು ಬಂದಿದ್ದು, ಕನ್ನಡ ಪತ್ರಿಕೆ 1 ರಲ್ಲಿ 32 ದೋಷಗಳು ಮತ್ತು ಪತ್ರಿಕೆ 2ರಲ್ಲಿ 27 ದೋಷಗಳಿದ್ದು ಒಟ್ಟು 69 ದೋಷಗಳಿದ್ದವು. ಆದರೆ, ಮರು ಪರೀಕ್ಷೆ ಮಾಡಲು ಒತ್ತಾಯಿಸಿದರೂ ನಡೆಸಿಲ್ಲವೆಂದು ನ್ಯಾಯಪೀಠಕ್ಕೆ ವಿವರಿಸಿದರು.
ಕನ್ನಡ ಭಾಷೆಯ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿಗೆ ಜ.16ರಂದು ಮನವಿ ಸಲ್ಲಿಸಲಾಗಿದೆ. ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಬದಲಿಗೆ ಒಂದು ದಿನಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಅದಕ್ಕೆ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡುವಂತೆ ನಿರ್ದೇಶನ ಕೋರಿದ್ದ ಅರ್ಜಿದಾರರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಾಲಯಗಳು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡುವಂತೆ ನಿರ್ದೇಶನವನ್ನು ನೀಡುವಂತೆ ಕೋರಲಾಗಿದೆ. ಆ ರೀತಿಯ ಅನುಮತಿ ನೀಡುವುದಕ್ಕೆ ಅವಕಾಶವಿಲ್ಲ. ನೀವು(ಅರ್ಜಿದಾರರು) ಏನನ್ನಾದರೂ ಮಾಡಬೇಕು ಎಂದಾದರೆ, ಅದನ್ನು ಕಾನೂನು ಪ್ರಕಾರ ಮುಂದುವರಿಸಬಹುದು. ಕಾನೂನಿಗನುಗುಣವಾಗಿ ನಡೆಯುವ ಪ್ರಕ್ರಿಯೆಗೆ ಅಡ್ಡಿಪಡಿಸಿದಲ್ಲಿ ಅದಕ್ಕೆ ನ್ಯಾಯಾಲಯದ ಮುಂದೆ ಬರಬಹುದು ಎಂದು ತಿಳಿಸಿದ ಪೀಠ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿದೆ.







