ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧು: ಏನಿದು ಪ್ರಕರಣ?

ಕೆ.ವೈ.ನಂಜೇಗೌಡ
ಬೆಂಗಳೂರು : ಮಾಲೂರು ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರ ವಿರುದ್ಧ ಕೇವಲ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮತ ಎಣಿಕೆ ವೇಳೆ ಲೋಪವಾಗಿದೆ ಎಂದು ಆರೋಪಿಸಿದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ, ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ, ಮುಂದಿನ ನಾಲ್ಕು ವಾರಗಳಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಆದರೆ, ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನಂಜೇಗೌಡ ಪರ ವಕೀಲರು ಆದೇಶವನ್ನು 30 ದಿನಗಳ ಕಾಲ ಅಮಾನತಿನಲ್ಲಿಡುವಂತೆ ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ ಏನು?:
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ 50,955 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ 50,707 ಮತ ಗಳಿಸಿದ್ದರು. ಕೇವಲ 248 ಮತಗಳ ಅಂತರದಿಂದ ನಂಜೇಗೌಡ ಗೆಲವು ಸಾಧಿಸಿದ್ದರು. ಇದರಿಂದಾಗಿ ಮಂಜುನಾಥ್ ಗೌಡ ಮತ್ತು ಬೆಂಬಲಿಗರು ಮರು ಮತ ಎಣಿಕೆಗೆ ಒತ್ತಾಯ ಮಾಡಿದ್ದರು.
ಮರು ಎಣಿಕೆಗೆ ಪಟ್ಟು ಹಿಡಿದಾಗ ಚುನಾವಣಾಧಿಕಾರಿ ಮಂಜುನಾಥ್ ಗೌಡ ಅವರಿಗೆ ನಿಮಗೆ ಯಾವ ಬೂತ್ ಎಣಿಕೆಯಲ್ಲಿ ಅನುಮಾನ ಇದೆ ಎಂದು ಆಯ್ಕೆ ಮಾಡಿಕೊಳ್ಳಿ ಅದನ್ನು ಮತ್ತೆ ಎಣಿಕೆ ಮಾಡಿದಾಗ ವ್ಯತ್ಯಾಸ ಆದರೆ ಮರು ಎಣಿಕೆ ಮಾಡಲಾಗುವುದು, ವ್ಯತ್ಯಾಸ ಕಂಡುಬರದಿದ್ದರೆ ಮರು ಎಣಿಕೆ ಇಲ್ಲ ಎಂದು ತಿಳಿಸಿದ್ದರು. ಚುನಾವಣಾ ನಿಯಮದ ಪ್ರಕಾರ ಅಭ್ಯರ್ಥಿಗಳ ಸಮ್ಮುಖದಲ್ಲಿ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್ಗಳನ್ನು ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಲಾಯಿತು. ಆದರೆ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಆದ್ದರಿಂದ ಚುನಾವಣಾಧಿಕಾರಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದರು.
ಮಾಲೂರು ವಿಧಾನಸಭೆ ಕ್ಷೇತ್ರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳಾಗಿವೆ. ಆದ್ದರಿಂದ, ಆ ಕ್ಷೇತ್ರದಿಂದ ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಕೆ.ಎಸ್. ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್ ದೇವದಾಸ್ ಅವರು ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್ಡಿಸ್ಕ್ ಅನ್ನು ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಪಡೆಯಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ನ್ಯಾಯಾಲಯ ಸೂಚಿಸಿದೆ.
ಮತ ಎಣಿಕೆ ಪ್ರಕ್ರಿಯೆ ವೇಳೆ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಮತ್ತು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಕಾರ್ಯದ ದೃಶ್ಯಾವಳಿಯನ್ನು ಕೋರ್ಟ್ಗೆ ಸಲ್ಲಿಸಿ ಎಂದು ಹೈಕೋರ್ಟ್ ಕೋಲಾರ ಜಿಲ್ಲಾಧಿಕಾರಿಗೆ ಈ ಮೊದಲು ನಿರ್ದೇಶಿಸಿತ್ತು. ವಿಚಾರಣೆ ವೇಳೆ ಕೇಂದ್ರ ಚುನಾವಣಾ ಆಯೋಗದ ಪರವಾಗಿ ವಕೀಲ ಶರತ್ ಅವರು ಹಾಜರಾಗಿ, ಮತ ಎಣಿಕೆ ಕುರಿತ ದೃಶ್ಯಾವಳಿಯನ್ನು ಒಳಗೊಂಡ ಒಂದು ಸಿಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಾಲೂರಿನಲ್ಲಿ, 1978, 1989, 1999 ಮತ್ತು 2018 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2004 ಮತ್ತು 2008 ರಲ್ಲಿ ಬಿಜೆಪಿ ಪಕ್ಷದ ಶಾಸಕರು ಆಯ್ಕೆಯಾಗಿದ್ದರೆ, 2013ರಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್ನ ಕೆ.ವೈ. ನಂಜೇಗೌಡರು ತಮ್ಮ ಜೆಡಿಎಸ್ ಪ್ರತಿಸ್ಪರ್ಧಿ ಕೆ.ಎಸ್. ಮಂಜುನಾಥ್ ಗೌಡ ಅವರನ್ನು 17,915 ಮತಗಳ ಅಂತರದಿಂದ ಸೋಲಿಸಿದ್ದರು. 2023ರಲ್ಲಿ ಇಬ್ಬರೂ ಮತ್ತೆ ಮುಖಾಮುಖಿಯಾಗಿದ್ದರು.







