ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ | ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಆದೇಶ

ಸೋನು ನಿಗಮ್ PC : instagram
ಬೆಂಗಳೂರು: ಕನ್ನಡದ ಹಾಡು ಕೇಳಿದ್ದಕ್ಕೆ ಪೆಹಲ್ಗಾಮ್ ಘಟನೆ ಉಲ್ಲೇಖಿಸಿ ಟೀಕೆ ಮಾಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್ ಮೇಲೆ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ.
ತನ್ನ ವಿರುದ್ಧದ ಎಫ್ಐಆರ್ ರದ್ದು ಕೋರಿ ಗಾಯಕ ಸೋನು ನಿಗಮ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೀಠ, ಕೋರ್ಟ್ ಅನುಮತಿ ಪಡೆಯದೇ ಜಾರ್ಜ್ಶೀಟ್ ಸಲ್ಲಿಸಬಾರದು. ಜೊತೆಗೆ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರು ತನಿಖೆಗೆ ಹಾಜರಾಗಿಲ್ಲವೆಂದು ಹೆಚ್ಚುವರಿ ಎಸ್ಪಿಪಿ ಬಿ.ಎನ್.ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ತನಿಖೆಗೆ ಸಹಕರಿಸಿದರೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂದು ಹೇಳಿಕೆ ನೀಡಿದರು.
ಬಳಿಕ ಸೋನು ನಿಗಮ್ ಪರ ವಕೀಲರು, ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು. ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿಗೆ ಸೋನು ನಿಗಮ್ ವಕೀಲರ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸೋನು ನಿಗಮ್ ವೆಚ್ಚದಲ್ಲೇ ಅವರಿದ್ದ ಸ್ಥಳದಲ್ಲಿ ತನಿಖೆ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದರು.







