ಸೆರೆ ಹಿಡಿದ ಕಾಳಿಂಗ ಸರ್ಪದ ಫೋಟೋ ತೆಗೆದ ಆರೋಪ : ಹಾವು ರಕ್ಷಕ ಗೌರಿಶಂಕರ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅದರ ಫೋಟೋ ತೆಗೆದ ಆರೋಪದಲ್ಲಿ ಉರಗ ರಕ್ಷರೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿಯ ಡಾ.ಪಿ.ಗೌರಿಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಪುರಸ್ಕರಿಸಿದೆ.
ಅರ್ಜಿದಾರರು ಕಾಳಿಂಗ ಸರ್ಪವನ್ನು ಬಂಧನದಲ್ಲಿಟ್ಟಿದ್ದರು, ಕೊಂದಿದ್ದರು, ಗಾಯಗೊಳಿಸಿದ್ದರು ಅಥವಾ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು ಎಂಬ ಆರೋಪಗಳಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಕಾಳಿಂಗ ಸರ್ಪವನ್ನು ಅರ್ಜಿದಾರರು ವಾಸ್ತವವಾಗಿ ಸೆರೆಹಿಡಿದಿದ್ದರು ಎಂಬುದನ್ನು ಪ್ರಾಸಿಕ್ಯೂಷನ್ ದಾಖಲೆಗಳು ಸಾಬೀತುಪಡಿಸಿಲ್ಲ. ಆರೋಪ ಪಟ್ಟಿಯೊಂದಿಗೆ ಸಲ್ಲಿಸಿರುವ ಫೋಟೋಗಳನ್ನು ಗಮನಿಸಿದರೆ, ಕಾಳಿಂಗ ಸರ್ಪವು ಅರಣ್ಯದ ತೆರೆದ ಪ್ರದೇಶದಲ್ಲಿರುವುದು ಕಂಡುಬರುತ್ತದೆ. ಅದನ್ನು ಬಂಧನದಲ್ಲಿಟ್ಟಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದವೇ ಹೊರತು ಅರ್ಜಿದಾರರಿಂದ ವಶಪಡಿಸಿಕೊಳ್ಳಲಾಗಿರಲಿಲ್ಲ. ಜತೆಗೆ, ಅರ್ಜಿದಾರರು ತಾವು ರಕ್ಷಿಸಿದ ಕಾಳಿಂಗ ಸರ್ಪದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ, ದೂರಿನಲ್ಲಿ ಆರೋಪಿಸಲಾಗಿರುವ ಯಾವುದೇ ಅಪರಾಧವನ್ನು ಅರ್ಜಿದಾರರು ಎಸಗಿದ್ದಾರೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬರಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣವೇನು? :
ಕಾಳಿಂಗ ಸರ್ಪವನ್ನು ಸೆರೆಹಿಡಿದು ಬಂಧನದಲ್ಲಿದ್ದಾಗ ಅದರ ಫೋಟೋ ತೆಗೆದಿದ್ದರು ಹಾಗೂ ಇತರರಿಗೂ ಅದರ ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದರು ಎಂಬುದು ಶಂಕರ್ ವಿರುದ್ಧದ ಆರೋಪವಾಗಿತ್ತು. ಮೂರನೇ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋದಲ್ಲಿ ಅರ್ಜಿದಾರರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ರದ್ದು ಕೋರಿ ಗೌರಿಶಂಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಗೌರಿಶಂಕರ್ ಪರ ವಕೀಲರು, ಆರೋಪ ಪಟ್ಟಿಯಲ್ಲಿರುವ ದಾಖಲೆಗಳು ಅರ್ಜಿದಾರರು ಕಿಂಗ್ ಕೋಬ್ರಾವನ್ನು ಬೇಟೆಯಾಡಿದ್ದ ಅಥವಾ ಸೆರೆಹಿಡಿದಿದ್ದನ್ನು ಸಾಬೀತುಪಡಿಸುವುದಿಲ್ಲ. ಪ್ರಾಸಿಕ್ಯೂಷನ್ ಅವಲಂಬಿಸಿದ್ದ ಫೋಟೋಗಳಲ್ಲಿ ಹಾವು ಅರಣ್ಯದ ತೆರೆದ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಬಂಧನದಲ್ಲಿಟ್ಟಿರುವುದು ಕಂಡುಬರುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ಆರೋಪ ಪಟ್ಟಿಯಲ್ಲಿನ ದಾಖಲೆಗಳ ಪ್ರಕಾರ ಅರ್ಜಿದಾರರು ಇತರರಿಗೆ ಕಾಳಿಂಗ ಸರ್ಪದ ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದರು. ಜತೆಗೆ, ಫೋಟೋ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಕಾರಣರಾಗಿದ್ದರು ಎಂದು ವಾದಿಸಿದ್ದರು.






