ದೈವಪಾತ್ರಗಳ ಅಪಹಾಸ್ಯ ಪ್ರಕರಣ; ರಣವೀರ್ ಸಿಂಗ್ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ರಣವೀರ್ ಸಿಂಗ್ | PC : PTI
ಬೆಂಗಳೂರು: ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಒಂದು ತಿಂಗಳಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವಂತೆ ಸೂಚಿಸಲಾಗುವುದು ಎಂದಿರುವ ಹೈಕೋರ್ಟ್, ರಣವೀರ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ದೈವಗಳನ್ನು ಅಪಹಾಸ್ಯ ಮಾಡಿದ ಹಾಗೂ ಚಾವುಂಡಿ ದೈವವನ್ನು 'ಹೆಣ್ಣು ದೆವ್ವ' ಎಂದು ಕರೆದ ಆರೋಪ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ರಣವೀರ್ ಸಿಂಗ್ ಪರ ಹಾಜರಿದ್ದ ಹಿರಿಯ ವಕೀಲ ಸಜನ್ ಪೂವಯ್ಯ, ಅರ್ಜಿದಾರರು ಬೇಷರತ್ ಕ್ಷಮೆಯಾಚಿಸಿರುವ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಅರ್ಜಿದಾರರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಲಾಗಿದ್ದು, ದಿನಾಂಕ ನಮೂದಿಸಿಲ್ಲ. ನ್ಯಾಯಪೀಠವೇ ನಿರ್ದಿಷ್ಟ ದಿನ ನಿಗದಿ ಮಾಡಬಹುದು. ಆ ದಿನ ರಣವೀರ್ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ದೂರುದಾರರ ಪರ ವಕೀಲರು, ಪ್ರತಿಯೊಂದು ಪದಕ್ಕೂ ತನ್ನದೇ ಆದ ತೂಕವಿದೆ. ಪದಗಳು ಪ್ರಭಾವ ಮತ್ತು ಪರಿಣಾಮಗಳನ್ನು ಉಂಟು ಮಾಡುತ್ತವೆ. ಇನ್ನು ಸಮಯ ಬಂದಾಗ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು ಎಂದು ರಣವೀರ್ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ. ಅದು 30, 40 ದಿನವಾಗಬಹುದು. ಒಂದು ವರ್ಷ, ಹತ್ತು ವರ್ಷ ಆಗಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಇದಕ್ಕೆ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಅರ್ಜಿದಾರರು ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದರು. ಆಗ ದೂರುದಾರರ ಪರ ವಕೀಲರು, ಇತರ ಸೆಲೆಬ್ರಿಟಿಗಳು ಇದನ್ನು ಲಘುವಾಗಿ ಪರಿಗಣಿಸಬಾರದು. ಕಠಿಣ ಎಚ್ಚರಿಕೆಯನ್ನು ಈ ನ್ಯಾಯಾಲಯ ನೀಡಬೇಕು ಎಂದರು.
ನ್ಯಾಯಪೀಠ ಪ್ರತಿಕ್ರಿಯಿಸಿ, ಖಂಡಿತವಾಗಿಯೂ ಎಚ್ಚರಿಸಲಾಗುವುದು. ಕಾನೂನಿನ ಅನ್ವಯ ಉತ್ತರಿಸಬೇಕು ಎಂದಾದರೆ ಎಚ್ಚರಿಸುವ ಪರಿಸ್ಥಿತಿ ನಿರ್ಮಾಣವೇ ಆಗುವುದಿಲ್ಲ ಎಂದು ಹೇಳಿತು.
ಈ ನಡುವೆ ಸಜನ್ ಪೂವಯ್ಯ ಅವರು, ಈ ವಾದದಲ್ಲಿ ನಾವು ಭಾಗಿಯಾಗುವುದಿಲ್ಲ. ಜನರ ಭಾವನೆಗಳು ನಮಗೆ ಅರ್ಥವಾಗುತ್ತವೆ. ಅದೇ ಕಾರಣಕ್ಕಾಗಿ ಪ್ರಕರಣದ ಮೆರಿಟ್ ಮೇಲೆ ವಾದಿಸಲಿಲ್ಲ. ಪ್ರಕರಣದ ಸೂಕ್ಷ್ಮತೆ ಅರ್ಥವಾಗಿದ್ದು, ರಣವೀರ್ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.
ಈ ಹಂತದಲ್ಲಿ ನ್ಯಾಯಮೂರ್ತಿಗಳು, ಜನರ ಭಾವನೆಗಳನ್ನು ಕೇಳಿಯಾಗಿದೆ. ಕಾನೂನಾತ್ಮಕವಾಗಿ ಉತ್ತರಿಸಬೇಕು ಎಂದಾದರೆ ಸಾಕಷ್ಟು ತೀರ್ಪುಗಳಿವೆ. ಅರ್ಜಿ ಇತ್ಯರ್ಥಪಡಿಸುವಾಗ ನಾಲ್ಕು ವಾರದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲು ನಾನೇ ಹೇಳುತ್ತೇನೆ ಎಂದರು.
ಆಗ ಪೂವಯ್ಯ ಅವರು, ಎರಡು ನಿರ್ದಿಷ್ಟ ಸಿನಿಮಾಗಳು ಬಂದ ನಂತರ ಭದ್ರತೆಯ ಸಮಸ್ಯೆ ಹೆಚ್ಚಾಗಿದೆ ಎಂದರು. ಇದಕ್ಕೆ ನ್ಯಾಯಪೀಠ, ಭದ್ರತೆಯ ಸಮಸ್ಯೆ. ಅರ್ಜಿದಾರರು ಜವಾಬ್ದಾರಿಯುತ ನಾಗರಿಕರಾಗಿದ್ದು, ಅವರು ಅದನ್ನು ಮಾಡಲಿದ್ದಾರೆ ಎಂದು ಹೇಳಿತು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಅರ್ಜಿದಾರರು ದೇವಾಲಯ ಭೇಟಿಗೆ ಬರುವ ಮಾಹಿತಿಯನ್ನು ಮುಂಚಿತವಾಗಿ ನೀಡಲು ಆದೇಶಿಸಬೇಕು ಎಂದರು.
ಎಲ್ಲರ ವಾದ ಆಲಿಸಿದ ನ್ಯಾಯಪೀಠ, ರಣವೀರ್ ಪ್ರಮಾಣಪತ್ರವನ್ನು ಸ್ವೀಕರಿಸಿ, ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.






