ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ: ಸರಕಾರಕ್ಕೆ ನೋಟಿಸ್

Photo credit: PTI
ಬೆಂಗಳೂರು: ಜನವರಿ 29ರಿಂದ ಆರಂಭವಾಗಲಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡಲು ಹೈಕೋರ್ಟ್ ನಿರಾಕರಿಸಿದೆ.
ಹೊಸದಾಗಿ ಆಯ್ಕೆ ಸಮಿತಿ ರಚಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಚಿತ್ರ ನಿರ್ಮಾಪಕರಾದ ಸಂವಿಧಾನ ಸಿನಿ ಕಂಬೈನ್ಸ್ನ ಎ.ವಿ. ನಾಗರಾಜು ಮತ್ತು ಎ.ಆರ್. ಪ್ರೊಡಕ್ಷನ್ಸ್ನ ಅರುಣ್ ರೈ ತೋಡರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಈ ಕುರಿತು ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಚಿತ್ರೋತ್ಸವ ಆರಂಭವಾಗುವ ಕೊನೇ ಕ್ಷಣದಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಈ ಹಂತದಲ್ಲಿ ತಡೆ ನೀಡಲಾಗದು ಎಂದು ತಿಳಿಸಿದ್ದಲ್ಲದೆ, ಪ್ರತಿವಾದಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು, ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಹಾಗೂ ಸಹಕಾರ ಸಂಘಗಳ ಡೆಪ್ಯೂಟಿ ರಿಜಿಸ್ಟ್ರಾರ್ಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ಚಲನಚಿತ್ರೋತ್ಸವಕ್ಕೆ ಚಿತ್ರಗಳನ್ನು ಆಯ್ಕೆ ಮಾಡಲು ರಚಿಸಿದ್ದ ಸಮಿತಿಯ ವಿರುದ್ಧವೇ ಆಕ್ಷೇಪ ಎತ್ತಿ ದೂರು ನೀಡಲಾಗಿದ್ದು, ಅದನ್ನು ಪರಿಹರಿಸಿಲ್ಲ. ಆಯ್ಕೆ ಸಮಿತಿಯು ಪಾರದರ್ಶಕ ರೀತಿಯಲ್ಲಿ ಚಿತ್ರಗಳನ್ನು ಆಯ್ಕೆ ಮಾಡಿಲ್ಲ. ಆದ್ದರಿಂದ ಹೊಸ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಮುಂದುವರಿದು, ಚಲನಚಿತ್ರೋತ್ಸವದ ಹೆಸರಿನಲ್ಲಿ ಸಾಕಷ್ಟು ಹಣಕಾಸು ಅವ್ಯವಹಾರ ನಡೆದಿದೆ. ಆ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ದೂರು ನೀಡಲಾಗಿದೆ. ಚಿತ್ರೋತ್ಸವವನ್ನು ಒರಾಯನ್ ಮಾಲ್ನಿಂದ ಲುಲು ಮಾಲ್ಗೆ ಸ್ಥಳಾಂತರ ಮಾಡಲಾಗಿದೆ. ಚಿತ್ರೋತ್ಸವಕ್ಕೆ ಚಿತ್ರಗಳ ಆಯ್ಕೆಯಲ್ಲಿ ಪ್ರತಿವರ್ಷ ಗೋಲ್ಮಾಲ್ ನಡೆಯುತ್ತಿದೆ. ಆದ್ದರಿಂದ, ಆ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಕೋರಿದರು.
ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರೂಬೆನ್ ಜಾಕೋಬ್, ಗುರುವಾರದಿಂದಲೇ ಚಲನಚಿತ್ರೋತ್ಸವ ಆರಂಭವಾಗುತ್ತಿದ್ದು, ಈ ಹಂತದಲ್ಲಿ ಯಾವುದೇ ತಡೆ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.







