ಬ್ಯಾಂಕ್ನಲ್ಲಿ ಗ್ರಾಹಕನನ್ನು ಕೊಂದು 15 ಲಕ್ಷ ದರೋಡೆ ಮಾಡಿದ್ದ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಳೆದ 14 ವರ್ಷಗಳ ಹಿಂದೆ ಕಾರ್ಪೋರೇಷನ್ ಬ್ಯಾಂಕ್ನ ಚಿಕ್ಕಬಾಣಾವರ ಶಾಖೆಯಲ್ಲಿ ನಡೆದಿದ್ದ ಗ್ರಾಹಕನ ಕೊಲೆ ಮತ್ತು 15 ಲಕ್ಷ ರೂ. ದರೋಡೆ ಪ್ರಕರಣ ಸಂಬಂಧ ಬಿಹಾರ ರಾಜ್ಯದ ಮೂವರು ಮತ್ತು ಛತ್ತೀಸಗಢದ ಓರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಬಿಹಾರ ಮೂಲದ ದೇವೇಶ್ ಕುಮಾರ್ ಸಿಂಗ್, ವಿಕಾಸ್ ಕುಮಾರ್ ಗುಪ್ತಾ, ಇ್ರಮಾನ್ ಮತ್ತು ಛತ್ತೀಸ್ಗಢದ ಪ್ರೇಮ ಕುಮಾರ್ ಸಾಹು ಜೀವಾವಧಿ ಶಿಕ್ಷೆಗೆ ಒಳಗಾದವರು.
ನಾಲ್ವರೂ ಅಪರಾಧಿಗಳು ಎರಡು ವಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಬೇಕು. ವಿಚಾರಣಾ ನ್ಯಾಯಾಲಯವು ಈ ಅಪರಾಧಿಗಳಿಗೆ ಶಿಕ್ಷೆ ಅನುಭವಿಸಲು ಜೈಲಿಗೆ ಕಳುಹಿಸಬೇಕು. ಎಲ್ಲ ಅಪರಾಧಿಗಳಿಗೆ ವಿಧಿಸಲಾದ ತಲಾ 90 ಸಾವಿರ ರೂ. ಪೈಕಿ ಶೇ.80 ಹಣವನ್ನು ಘಟನೆಯಲ್ಲಿ ಕೊಲೆಗೀಡಾದ ಮುರಳೀಧರ ಎಂಬಾತನ ಪತ್ನಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಸಾಕ್ಷ್ಯಧಾರಗಳ ಪ್ರಕಾರ ದೇವೇಶ್ ಕುಮಾರ್ ಸಿಂಗ್ ಬ್ಯಾಂಕ್ನೊಳಗೆ ಅತಿಕ್ರಮ ಪ್ರವೇಶ ಮಾಡಿ ಮುರಳೀಧನನ್ನು ಕೊಂದು 15 ಲಕ್ಷ ರೂ. ದರೋಡೆ ಮಾಡಿದ್ದಾನೆ. ಆತನೊಂದಿಗೆ ಅಪರಾಧಿಕ ಒಳಸಂಚು ನಡೆಸಿದ್ದ ಇತರ ಮೂವರು ಬ್ಯಾಂಕ್ನ ಹೊರಗಡೆ ನಿಂತಿದ್ದರು. ಬ್ಯಾಂಕ್ ಸೈರನ್ ಕೇಳಿ ಎಲ್ಲರೂ ಪರಾರಿಯಾಗಿದ್ದರು. ಅದಕ್ಕೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯಿದೆ. ದರೋಡೆ ನಂತರ ಎಲ್ಲ ಆರೋಪಿಗಳು ಹಣ ಹಂಚಿಕೊಂಡಿರುವು ದೃಢಪಟ್ಟಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
2012ರ ನವೆಂಬರ್ 19ರ ಸಂಜೆ 4 ಗಂಟೆಗೆ ತಲೆ ಟೋಪಿತೊಟ್ಟು ಕೈಯಲ್ಲಿ ಪಿಸ್ತೂಲ್ ಹಿಡಿದು ಕಾರ್ಪೋರೇಷನ್ ಬ್ಯಾಂಕಿನ ಚಿಕ್ಕಬಾಣಾವರ ಶಾಖೆಯ ಒಳ ನುಗ್ಗಿದ ದೇವೇಸ್ ಕುಮಾರ್ ಸಿಂಗ್, ಮ್ಯಾನೇಜರ್ ಅನ್ನು ಹೊರಗೆ ಕರೆದು ಹಣ ನೀಡಲು ಬೇಡಿಕೆಯಿಟ್ಟಿದ್ದಲ್ಲದೆ, ಗ್ರಾಹಕರಿಗೆ ಪಿಸ್ತೂಲ್ ತೋರಿಸಿ ಕದಲದಂತೆ ಎಚ್ಚರಿಕೆ ನೀಡಿದ್ದ. ಆದರೆ, ಆ ಎಚ್ಚರಿಕೆಯನ್ನು ಪಾಲಿಸದಕ್ಕೆ ಮುರಳಿಧರ ಎಂಬವರಿಗೆ ದೇವೇಸ್ ಗುಂಡಿಕ್ಕಿ ಕೊಂದಿದ್ದ. ನಂತರ ಕ್ಯಾಷಿಯರ್ ಬಳಿ 15.23 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ.
ಈ ಕುರಿತು ಶಾಖೆಯ ಮ್ಯಾನೇಜರ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಸೋಲದೇವನಹಳ್ಳಿ ಠಾಣೆ ಪೊಲೀಸರು, ಅದೇ ದಿನ ಬೆಂಗಳೂರಿನ ಸನ್ಮಾನ್ ಲಾಡ್ಜ್ನಲ್ಲಿ ತಂಗಿದ್ದ ದೇವೇಸ್ನನ್ನು ಬಂಧಿಸಿ, ಆತನಿಂದ 7 ಲಕ್ಷ ರೂ. ಜಪ್ತಿ ಮಾಡಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆ ಒಳಸಂಚು ರೂಪಿಸಿದ್ದ ಇತರ ಮೂವರ ಬಗ್ಗೆ ಬಾಯಿಬಿಟ್ಟಿದ್ದ. ಆ ಮೂವರನ್ನು ಬಂಧಿಸಿ ಹಣ ಜಪ್ತಿ ಮಾಡಿದ್ದರು. ಎಲ್ಲ ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ವಿಕಾಸ್ ಕುಮಾರ್ ಗುಪ್ತಾ, ಇ್ರಮಾನ್ ಮತ್ತು ಪ್ರೇಮ ಕುಮಾರ್ ಸಾಹು ಅವರನ್ನು ಖುಲಾಸೆಗೊಳಿಸಿ 2016ರ ಎಪ್ರಿಲ್ನಲ್ಲಿ ಆದೇಶಿಸಿತ್ತು. ಮೊದಲನೇ ಆರೋಪಿ ದೇವೇಶ್ ಕುಮಾರ್ ಸಿಂಗ್ ಅನ್ನು ಅತಿಕ್ರಮ ಪ್ರವೇಶ ಮತ್ತು ದರೋಡೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದದ ಅಪರಾಧದಡಿ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ದೇವೇಶ್ ಕುಮಾರ್ ಸಿಂಗ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಮತ್ತೊಂದೆಡೆ ಎಲ್ಲ ಆರೋಪಿಗಳನ್ನು ಕೊಲೆ, ದರೋಡೆ, ಕೊಲೆಯೊಂದಿಗೆ ದರೋಡೆ, ಅಪರಾಧಿಕ ಒಳಸಂಚು, ಅತಿಕ್ರಮ ಪ್ರವೇಶ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಅಪರಾಧಗಳಲ್ಲಿ ದೋಷಿಗಳೆಂದು ತೀರ್ಮಾನಿಸಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಕೋರಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಇದೀಗ, ದೇವೇಶ್ ಕುಮಾರ್ ಸಿಂಗ್ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿ ವಿಚಾರಣಾ ನ್ಯಾಯಾಲಯ ಆದೇಶವನ್ನು ತಿದ್ದುಪಡಿ ಮಾಡಿ ಈ ತೀರ್ಪು ಮಾಡಿದೆ.







