ಎಫ್ಐಆರ್ಗೆ ಹೈಕೋರ್ಟ್ ತಡೆಯಾಜ್ಞೆ; ನಟ ಉಪೇಂದ್ರ ಪ್ರತಿಕ್ರಿಯೆ ಏನು ?
![ಎಫ್ಐಆರ್ಗೆ ಹೈಕೋರ್ಟ್ ತಡೆಯಾಜ್ಞೆ; ನಟ ಉಪೇಂದ್ರ ಪ್ರತಿಕ್ರಿಯೆ ಏನು ? ಎಫ್ಐಆರ್ಗೆ ಹೈಕೋರ್ಟ್ ತಡೆಯಾಜ್ಞೆ; ನಟ ಉಪೇಂದ್ರ ಪ್ರತಿಕ್ರಿಯೆ ಏನು ?](https://www.varthabharati.in/h-upload/2023/08/14/1180214-fb9.webp)
ಬೆಂಗಳೂರು, ಆ.14: ‘ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು(ಸಿ.ಕೆ.ಅಚ್ಚುಕಟ್ಟು) ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಈ ಬಗ್ಗೆ ಉಪೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ʼʼಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ, ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… ನನಗೆ ಕೊಡೆ ಧನ್ಯವಾದಗಳು Thank you allʼʼ ಎಂದು ಉಪೇಂದ್ರ ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಾನು ಯಾವುದೇ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಳ್ಳೆಯದನ್ನು ಮಾಡುವಾಗಲೂ ಟೀಕಿಸುವವರು ಇದ್ದೇ ಇರುತ್ತಾರೆ. ಈ ಮಾತಿಗೆ ಪೂರಕವಾಗಿ ಆ ಗಾದೆ ಬಳಸಲಾಗಿದೆ. ಆಕ್ಷೇಪ ವ್ಯಕ್ತವಾದ ಕೂಡಲೇ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೋರಿದ್ದೇನೆ. ಹಳೆಯ ಗಾದೆ ಮಾತನ್ನು ಉಲ್ಲೇಖಿಸಿದ್ದು ಜಾತಿನಿಂದನೆಯಲ್ಲ. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಎಸಗಿಲ್ಲ ಎಂದು ಉಪೇಂದ್ರ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.