ಸಿವಿಲ್ ಪ್ರಕರಣಗಳ ಇತ್ಯರ್ಥಕ್ಕೆ ಕ್ರಾಂತಿಕಾರಕ ಹೆಜ್ಜೆ, ಶೀಘ್ರವೇ ಅಧಿಸೂಚನೆ : ಎಚ್.ಕೆ.ಪಾಟೀಲ್

ಎಚ್.ಕೆ.ಪಾಟೀಲ್
ಬೆಂಗಳೂರು : ಸಿವಿಲ್ ಪ್ರಕರಣಗಳಲ್ಲಾಗುತ್ತಿರುವ ವಿಳಂಬ ಪ್ರಶ್ನಿಸಿ ಶ್ರೀಸಾಮಾನ್ಯರಿಗೆ ನ್ಯಾಯ ಒದಗಿಸುವ ಮಹತ್ವದ ಸಿಪಿಸಿ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅವರು ಅಂಕಿತ ಹಾಕದೇ ರಾಷ್ಟ್ರಪತಿಯವರಿಗೆ ರವಾನಿಸಿದ್ದರು. ಆದರೆ, ರಾಷ್ಟ್ರಪತಿ ಅವರು ಅಂಕಿತ ಹಾಕಿದ್ದು, ಶೀಘ್ರದಲ್ಲಿಯೇ ಕಾಯ್ದೆ ಜಾರಿಗೆ ಬರಲಿದೆ ಎಂದರು.
ಸಿವಿಲ್ ಪ್ರಕರಣಗಳ ಇತ್ಯರ್ಥದಲ್ಲಿ ಕ್ರಾಂತಿಕಾರಕ ಪುರೋಗಾಮಿ ಬೆಳವಣಿಗೆಯಾಗಲಿದೆ ಎಂದ ಅವರು, ಹೊಸ ನಿಯಮಗಳ ಪ್ರಕಾರ ಸಿವಿಲ್ ಪ್ರಕರಣಗಳಿಗೆ ಆರಂಭದಲ್ಲಿ 2 ತಿಂಗಳ ಕಾಲ ಸಂಧಾನಕ್ಕೆ ಅವಕಾಶ ನೀಡಲಾಗುವುದು.
ಅದು ಯಶಸ್ವಿಯಾಗದೇ ಅನಿವಾರ್ಯವಾಗಿ ಪ್ರಕರಣ ದಾಖಲಾದರೆ ಆ ದಿನವೇ ಪ್ರಕರಣದ ವಿಚಾರಣೆ, ಸಾಕ್ಷ್ಯ ಹಾಜರಿ, ತೀರ್ಪು ಪ್ರಕಟಿಸುವ ದಿನಾಂಕ ಸೇರಿದಂತೆ ಎಲ್ಲದಕ್ಕೂ ವೇಳಾಪಟ್ಟಿ ನಿಗದಿಯಾಗಬೇಕು. ಪ್ರಕರಣ ಇತ್ಯರ್ಥಕ್ಕೆ ಗರಿಷ್ಠ 24 ತಿಂಗಳ ಅವಧಿ ನಿಗದಿಯಾಗಿರುತ್ತದೆ ಎಂದು ಅವರು ವಿವರಿಸಿದರು.
ಒಂದು ವೇಳೆ ಪ್ರತಿವಾದಿ ಸಹಕಾರ ನೀಡದೇ ಇದ್ದರೆ ಅಂತಹ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನ್ಯಾಯಾಲಯದ ಬಲವನ್ನು ಈ ಕಾಯ್ದೆ ಹೆಚ್ಚಿಸುತ್ತದೆ. ಲಿಖಿತ ಹೇಳಿಕೆ ದಾಖಲಿಸಲು 120 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಆ ಅವಧಿಯ ಒಳಗೆ ಲಿಖಿತ ಹೇಳಿಕೆ ದಾಖಲಿಸಲು ಸಹಕರಿಸದಿದ್ದರೆ ಅನಂತರ ಬರುವ ಹೇಳಿಕೆಯನ್ನು ನಿರಾಕರಿಸುವ ಅಧಿಕಾರ ನ್ಯಾಯಾಲಯಕ್ಕಿದೆ. ಈ ಮೂಲಕ ಪ್ರಕರಣಗಳ ನಿರ್ವಹಣೆಯ ವ್ಯವಸ್ಥೆಯನ್ನು ಸಂಪೂರ್ಣ ಪುನರ್ ವ್ಯಾಖ್ಯಾನ ಮಾಡಲಾಗಿದೆ ಎಂದೂ ಅವರು ಹೇಳಿದರು.
ಸಾಮಾನ್ಯರಿಗೆ ನ್ಯಾಯ ವಿಳಂಬದ ದ್ರೋಹವಾಗುತ್ತಿದೆ. ಇದನ್ನು ತಡೆಯುವುದು ಸರಕಾರದ ಪ್ರಮುಖ ಉದ್ದೇಶ. ಹೀಗಾಗಿ ವಿಧಾನಮಂಡಲದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ತರುವ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದಕ್ಕೆ ಶಾಸಕಾಂಗ ಸಂಪೂರ್ಣ ಸಹಕಾರ ನೀಡಿದೆ. ನ್ಯಾಯಾಂಗವೂ ಸಹಕಾರ ನೀಡಿ ಕಾಯ್ದೆಯ ಉದ್ದೇಶ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಸಿವಿಲ್ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಗೂ ಈ ಮಸೂದೆಯ ಜಾರಿಗೂ ಸಂಬಂಧ ಇಲ್ಲ. ನಮ್ಮ ಸರಕಾರ ನೂರಕ್ಕೂ ಹೆಚ್ಚು ಗ್ರಾಮ ನ್ಯಾಯಾಲಯವನ್ನು ಆರಂಭಿಸಿದೆ. 158 ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ ಎಂದು ಅವರು ವಿವರಿಸಿದರು.
ಎಷ್ಟು ಪ್ರಕರಣ ಬಾಕಿ?: ‘ರಾಜ್ಯದ ಕೆಳಹಂತದ ನ್ಯಾಯಾಲಯದಲ್ಲಿ 2023ರ ವೇಳೆಗೆ 9,37,238 ಪ್ರಕರಣಗಳು ಬಾಕಿ ಇವೆ. ಒಟ್ಟಾರೆ 30.49 ಲಕ್ಷ ಸಿವಿಲ್ ಪ್ರಕರಣಗಳು ಬೇರೆಬೇರೆ ಹಂತದಲ್ಲಿ ಬಾಕಿ ಉಳಿದಿವೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
‘ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಿಗೆ ದಶಕಗಟ್ಟಲೇ ಕಾಯುವ, ವಿಳಂಬಕ್ಕೆ ಮುಕ್ತಿ ನೀಡಲು ಕರ್ನಾಟಕ ಯಶಸ್ವಿಯಾದ ದಿಟ್ಟಹೆಜ್ಜೆಯನ್ನಟ್ಟಿದೆ. ಕರ್ನಾಟಕ ಸರಕಾರ ಕ್ರಾಂತಿಕಾರಕ ತಿದ್ದುಪಡಿಯನ್ನು ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಮಾಡಿದೆ. ಈ ತಿದ್ದುಪಡಿಗೆ ಘನತೆವೆತ್ತ ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಈ ಐತಿಹಾಸಿಕ ತಿದ್ದುಪಡಿ ರಾಷ್ಟ್ರದಲ್ಲಿಯೇ ಮೊದಲು. ತಕ್ಷಣದಿಂದ ಈ ತಿದ್ದುಪಡಿ ಜಾರಿಗೆ ಬರಲಿದೆ’
-ಎಚ್.ಕೆ.ಪಾಟೀಲ್, ಕಾನೂನು ಸಚಿವ







