ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಮನವೊಲಿಕೆಗೆ ಹೈಕಮಾಂಡ್ ಯತ್ನ; ಎಚ್.ಕೆ.ಪಾಟೀಲ್, ಎಂ.ಕೃಷ್ಣಪ್ಪ ನಿವಾಸಕ್ಕೆ ಸುರ್ಜೆವಾಲ ಭೇಟಿ

ರಣದೀಪ್ ಸಿಂಗ್ ಸುರ್ಜೆವಾಲ | Photo Credit: PTI Photo
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಮಂತ್ರಿ ಮಂಡಲದಲ್ಲಿ ಅವಕಾಶ ವಂಚಿತರಾಗಿ, ಮುನಿಸಿಕೊಂಡಿರುವ ಹಿರಿಯ ಶಾಸಕರು, ಮಾಜಿ ಸಚಿವರ ಮನವೊಲಿಕೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ಹೊಂದಿರುವ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಎಂ.ಕೃಷ್ಣಪ್ಪ ಅವರ ನಿವಾಸಕ್ಕೆ ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಂಗಳವಾರವು ಸಚಿವರಾದ ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ ಅವರು ಎಂ.ಕೃಷ್ಣಪ್ಪ ನಿವಾಸಕ್ಕೆ ಭೇಟಿ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಜೊತೆ ಪ್ರಸಕ್ತ ರಾಜಕೀಯ ಸನ್ನಿವೇಶನಗಳ ಕುರಿತು ಚರ್ಚಿಸಿದರು.




