‘ಕರಾವಳಿ ಜಿಲ್ಲೆಗಳಲ್ಲಿ ಕೆಂಪು ಕಲ್ಲಿನ ಸಮಸ್ಯೆ’ ; ನಾಳೆ ಸ್ಪೀಕರ್ ಅಧ್ಯಕ್ಷತೆಯಲ್ಲಿ ಶಾಸಕರ ಸಭೆ: ಎಚ್.ಕೆ.ಪಾಟೀಲ್

ಬೆಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಂಪು ಕಲ್ಲಿನ ಸಮಸ್ಯೆ ಉಂಟಾಗಿರುವ ಕುರಿತು ಚರ್ಚಿಸಿ, ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಮಧ್ಯಾಹ್ನ ಕಲಾಪದ ಭೋಜನ ವಿರಾಮದ ಸಂದರ್ಭದಲ್ಲಿ ಶಾಸಕರ ಸಭೆ ಕರೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಗಣಿ ಮತ್ತು ಭೂ ವಿಜ್ಞಾನ ಸಚಿವರ ಪರವಾಗಿ ಉತ್ತರಿಸಿದ ಅವರು, ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಅಶೋಕ್ ಕುಮಾರ್ ರೈ, ನಮ್ಮ ಭಾಗದಲ್ಲಿ ಮನೆಗಳನ್ನು ಕಟ್ಟಲು ಕೆಂಪುಕಲ್ಲು ಬಳಕೆ ಮಾಡುತ್ತಾರೆ. ಆದರೆ, ಕೆಂಪು ಕಲ್ಲು ತೆಗೆಯಲು ಪರವಾನಗಿ ನೀಡುವುದು ಸೇರಿದಂತೆ ಅತ್ಯಂತ ಕಠಿಣ ಕಾನೂನುಗಳನ್ನು ಹಾಕಿದ್ದಾರೆ. ಇದರಿಂದಾಗಿ, ಜನಸಾಮಾನ್ಯರು ಮನೆ ಕಟ್ಟಲು ಪರದಾಡುವಂತಾಗಿದೆ ಎಂದರು.
ಕೆಂಪು ಕಲ್ಲು ಸಾಗಿಸುವ ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಒಂದು ಟನ್ ಕೆಂಪು ಕಲ್ಲಿಗೆ ನಮ್ಮ ರಾಜ್ಯದಲ್ಲಿ 256 ರೂ.ರಾಜಧನ ವಿಧಿಸಲಾಗುತ್ತದೆ. ಅದೇ ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ 76 ರೂ.ರಾಜಧನ ಇದೆ. ಕೆಂಪು ಕಲ್ಲು ಸಮಸ್ಯೆಯಿಂದಾಗಿ ನಾಲ್ಕೈದು ತಿಂಗಳಿನಿಂದ ಗಾರೆ ಕೆಲಸ ಮಾಡುವವರು ಕೆಲಸ ಇಲ್ಲದೆ ಕೈ ಕಟ್ಟಿ ಕೂತಿದ್ದಾರೆ ಎಂದು ಅವರು ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಕೆಂಪು ಕಲ್ಲು ತೆಗೆಯುವವರನ್ನು ಅಪರಾಧಿಗಳಂತೆ ಕಾಣುತ್ತಿದ್ದಾರೆ. ಪೊಲೀಸರು ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕೆಂಪು ಕಲ್ಲು ಇಲ್ಲದಿದ್ದರೆ ಮನೆಗಳನ್ನು ಕಟ್ಟಲು ಸಾಧ್ಯವಿಲ್ಲ. ಕೆಂಪು ಕಲ್ಲು ಬಗ್ಗೆ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಗಿಂತ ಹೆಚ್ಚಾಗಿ ಗೃಹ ಇಲಾಖೆಯವರಿಗೆ ಆಸಕ್ತಿ ಹೆಚ್ಚಿದೆ ಎಂದು ಟೀಕಿಸಿದರು.
ಕರಾವಳಿ ಭಾಗದ ಹವಾಮಾನ, ಮಳೆಯ ಪರಿಣಾಮವಾಗಿ ಮನೆಗಳನ್ನು ಕಟ್ಟಲು ಕೆಂಪು ಕಲ್ಲು ಬಳಸಲಾಗುತ್ತದೆ. ಇದರ ಜೊತೆಗೆ, ಮರಳು ಪಡೆಯಲು ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಆದುದರಿಂದ, ಸಿಆರ್‍ಝೆಡ್‍ನಲ್ಲಿ ನಿಯಮಗಳನ್ನು ಸರಳೀಕರಣ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಬಿಜೆಪಿಯ ಇತರ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
‘ನಾವು ಸಮುದ್ರದ ಬದಿಯಲ್ಲಿದ್ದೇವೆ. ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ನಮ್ಮ ಮನೆಗಳ ನಿರ್ಮಾಣಕ್ಕೆ ಕೆಂಪು ಕಲ್ಲು ಬಳಸುತ್ತೇವೆ. ನಾವು ಮನೆ ಕಟ್ಟುವ ಜಾಗದಲ್ಲಿ ಲಭ್ಯವಾಗುವ ಕೆಂಪು ಕಲ್ಲು ತೆಗೆಯಲು ನಮಗೆ ಅವಕಾಶ ಇಲ್ಲದಿದ್ದರೆ ಹೇಗೆ? ಪರವಾನಗಿ ನೀಡುವ ವಿಚಾರದಲ್ಲೂ ಸಮಸ್ಯೆಗಳಿವೆ. ನಾಳೆ(ಮಂಗಳವಾರ) ನಡೆಯುವ ಸಭೆಯಲ್ಲಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ’
-ಯು.ಟಿ.ಖಾದರ್, ಸ್ಪೀಕರ್







