‘ರಾಜ್ಯ ಹಜ್ ಸಮಿತಿ’ ನಿಯಮಾವಳಿ-2025 ಜಾರಿಗೆ ತರಲು ಸಂಪುಟ ಒಪ್ಪಿಗೆ : ಎಚ್.ಕೆ.ಪಾಟೀಲ್

ಎಚ್.ಕೆ. ಪಾಟೀಲ್
ಬೆಂಗಳೂರು : ರಾಜ್ಯ ಹಜ್ ಸಮಿತಿ ನಿಯಮಾವಳಿ-2025 ಅನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ಹಜ್ ಯಾತ್ರೆಯನ್ನು ಕೈಗೊಳ್ಳಲು ಸೌದಿ ಅರೇಬಿಯಾಗೆ ತೆರಳುವ ರಾಜ್ಯದ ಹಜ್ ಯಾತ್ರಿಕರಿಗೆ ಸೇವೆಯನ್ನು ಒದಗಿಸುವ ಉದ್ದೇಶದಿಂದ ಹಜ್ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಹಜ್ ಸಮಿತಿಯ ಮೂಲಕ ಆಯ್ಕೆಯಾದ ಹಜ್ ಯಾತ್ರಿಕರು ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಹೈದರಾಬಾದ್ ಅನ್ನು ಎಂಬಾರ್ಕೇಷನ್ ಪಾಯಿಂಟ್ ಗಳಿಂದ ನೇರವಾಗಿ ಹಜ್ ಯಾತ್ರೆಗೆ ಪ್ರಯಾಣಿಸುತ್ತಾರೆ. ಹಜ್ ಯಾತ್ರಿಕರ ಸೌಲಭ್ಯಕ್ಕಾಗಿ ಈ ಎಲ್ಲ ಕೇಂದ್ರಗಳಲ್ಲಿ ಪ್ರತಿ ವರ್ಷ ಹಜ್ ಶಿಬಿರಗಳನ್ನು ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಆದರೆ, ಇದುವರೆವಿಗೂ ಹಜ್ ಸಮಿತಿಗೆ ಕಾರ್ಯವಿಧಾನವನ್ನು ನಿಗದಿಪಡಿಸುವ ಯಾವುದೆ ನಿಯಮಗಳು ಇರಲಿಲ್ಲ. ಪ್ರಸ್ತಾಪಿತ ನಿಯಮಾವಳಿ ಹಜ್ ಸಮಿತಿಯ ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವುದರೊಂದಿಗೆ ಅದರ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಿದೆ. ಕೇಂದ್ರ ಹಜ್ ಕಾಯ್ದೆ, 2002ರ ಕಲಂ 47ರ ಪ್ರಕಾರ ಕೇಂದ್ರದ ಕಾಯ್ದೆಯ ಉದ್ದೇಶಗಳನ್ನು ಜಾರಿಗೆ ತರುವ ಸಲುವಾಗಿ ರಾಜ್ಯ ಸರಕಾರವು ನಿಯಮಗಳನ್ನು ರೂಪಿಸಬೇಕಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.







