ಗ್ಯಾರಂಟಿ ಯೋಜನೆಗಳಿಂದ ಹೊಡೆತವಿಲ್ಲ, ಸಿಎಜಿಗೆ ಉತ್ತರಿಸುತ್ತೇವೆ : ಎಚ್.ಎಂ.ರೇವಣ್ಣ

ಬೆಂಗಳೂರು, ಆ.25: ರಾಜ್ಯದ ಆರ್ಥಿಕತೆಗೆ ಗ್ಯಾರಂಟಿ ಯೋಜನೆಗಳಿಂದ ಹೊಡೆತ ಬೀಳುತ್ತಿದೆ ಎಂದು ಲೆಕ್ಕಪರಿಶೋಧನಾ (ಸಿಎಜಿ) ವರದಿಯಲ್ಲಿನ ಅಂಶ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸಿಎಜಿಗೆ ಉತ್ತರಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 31 ಜಿಲ್ಲೆಗಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಜಿ ವರದಿ ಸಿದ್ಧಪಡಿಸುವಾಗ ಅನುದಾನ ಬಳಕೆ ಕುರಿತಂತೆ ಪರಿಶೀಲಿಸಿ, ವರದಿಯಲ್ಲಿ ತಿಳಿಸಬೇಕು. ಅದನ್ನು ಬಿಟ್ಟು ಯೋಜನೆಗಳ ಕುರಿತಂತೆ ವ್ಯಾಖ್ಯಾನಿಸಬಾರದು ಎಂದರು.
ಯೋಜನೆಗಳಿಂದ ಅಭಿವೃದ್ಧಿ ಮತ್ತು ಆದಾಯ ಕುಂಠಿತವಾಗುತ್ತದೆ ಎಂದು ತಿಳಿಸುವುದು ಸರಿಯಲ್ಲ. ಗ್ಯಾರಂಟಿ ಕುರಿತಂತೆ ಸಿಎಜಿ ವರದಿಯಲ್ಲಿ ನೀಡಿರುವ ಮಾಹಿತಿ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರ ಬಳಿಯೂ ಚರ್ಚೆ ಮಾಡುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಅದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಡದವರ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‍ಸಿಎಸ್‍ಪಿ-ಟಿಎಸ್‍ಪಿ ಅನುದಾನವನ್ನು ಗ್ಯಾರಂಟಿಗೆ ಬಳಸಿಲ್ಲ. ಅದು ಸತ್ಯಕ್ಕೆ ದೂರವಾದದ್ದಾಗಿದೆ. ಕಾಯ್ದೆ ಪ್ರಕಾರ ಆಯಾ ಸಮುದಾಯಗಳ ಏಳಿಗೆಗಾಗಿ ಅನುದಾನ ಬಳಕೆ ಮಾಡಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದರು.
ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆಗಳು ಶೇ.98ರಷ್ಟು ಅನುಷ್ಠಾಗೊಂಡಿವೆ. ಈವರೆಗೆ 94 ಸಾವಿರ ಕೋಟಿ ರು. ವ್ಯಯಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ, ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ರೇವಣ್ಣ ಹೇಳಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಎಸ್.ಆರ್.ಮೆಹ್ರೋಝ್ ಖಾನ್, ಡಾ.ಬಿ.ಪುಷ್ಪಾ ಅಮರ್‍ನಾಥ್, ಸೂರಜ್ ಹೆಗಡೆ, ಕೃಷ್ಣಪ್ಪ ಸೇರಿದಂತೆ ಪ್ರಮುಖರಿದ್ದರು.







