ನನ್ನ ಸಾಮರ್ಥ್ಯ ರಾಜ್ಯದ ಜನತೆಗೆ ಗೊತ್ತಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಅದನ್ನು ಕಾಪಾಡುವುದು ನನ್ನ ಜವಾಬ್ದಾರಿ. ಗೃಹ ಇಲಾಖೆಗೆ ನನಗೆ ಹೊಸದೇನಲ್ಲ. ಮೂರು ಬಾರಿ ಈ ಇಲಾಖೆಯನ್ನು ನಿರ್ವಹಿಸಿದ್ದೇನೆ. ನನ್ನ ಸಾಮರ್ಥ್ಯ ಏನು ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದರು.
ಸರಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಗಳ ಪ್ರಗತಿಯ ಕುರಿತು ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಗೃಹ ಸಚಿವರಾಗಲು ಪರಮೇಶ್ವರ್ ಅಸಮರ್ಥರು, ಅವರೊಬ್ಬ ಆಕಸ್ಮಿಕ ಗೃಹ ಸಚಿವ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಮಾಡಿರುವ ಟೀಕೆ ಕುರಿತು ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ನನ್ನ ಸಾಮರ್ಥ್ಯದ ಬಗ್ಗೆ ರಾಜ್ಯದ ಜನತೆಗೆ ಹಾಗೂ ನಾನು ಯಾವ ಯಾವ ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದೇನೋ, ಆ ಇಲಾಖೆಯವರಿಗೆ ಗೊತ್ತಿದೆ. ಆದುದರಿಂದ, ವಿರೋಧ ಪಕ್ಷದ ಮುಖಂಡರು ಮಾಡುವ ಟೀಕೆಗಳಿಂದ ನಾನು ಕುಗ್ಗಿ ಹೋಗುವುದಿಲ್ಲ. ಅವರಂತೆಯೇ ನಾನು ಹೇಳಿಕೆಗಳನ್ನು ನೀಡಿದರೆ ಏನಾಗಬಹುದು ಎಂದು ಪರಮೇಶ್ವರ್ ಪ್ರಶ್ನಿಸಿದರು.
ನಾವು ಬಿಜೆಪಿಯವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಕಾನೂನು ಬಾಹಿರವಾಗಿ ಹಗರಣಗಳು ನಡೆದಿವೆ. ಅದನ್ನು ಜನರಿಗೆ ತಿಳಿಸೋಣ ಎಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದ ತಕ್ಷಣ ಅದು ದ್ವೇಷದ ರಾಜಕಾರಣ ಆಗುತ್ತದೆಯೋ? ಮುಡಾ ಪ್ರಕರಣ ಹೊರಗೆ ಬರುವ ಮುನ್ನವೇ ನಮ್ಮ ಸರಕಾರ ಹಲವು ಹಗರಣಗಳನ್ನು ತನಿಖೆಗೆ ಒಳಪಡಿಸಿದೆ ಎಂದು ಅವರು ಹೇಳಿದರು.
ನಾವು ಹಗರಣಗಳ ಕುರಿತು ನಡೆಯುತ್ತಿರುವ ತನಿಖೆಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಾವು ಬೆಟ್ಟ ಅಗೆದು ಇಲಿ ಹಿಡಿಯುತ್ತೇವೆಯೋ?, ಇಲ್ಲ ಹೆಗ್ಗಣ ಹಿಡಿಯುತ್ತೇವೆಯೋ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಮುಖ್ಯಮಂತ್ರಿ ನಮಗೆ ಎರಡು ತಿಂಗಳ ಕಾಲಾವಕಾಶ ಕೊಟ್ಟಿದ್ದಾರೆ. ಅಷ್ಟರೊಳಗೆ ನಾವು ಬಿಜೆಪಿ ಸರಕಾರ, ಮೈತ್ರಿ ಸರಕಾರ ಹಾಗೂ ನಮ್ಮ ಸರಕಾರಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ಕುರಿತು ಚರ್ಚೆ ನಡೆಸಿ ಸಚಿವ ಸಂಪುಟಕ್ಕೆ ವರದಿಯನ್ನು ಸಲ್ಲಿಸಬೇಕಿದೆ ಎಂದು ಪರಮೇಶ್ವರ್ ಹೇಳಿದರು.
ಗುಪ್ತಚರ ಇಲಾಖೆಯ ಎಡಿಜಿಪಿಯಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ಅಧೀನದಲ್ಲಿದೆ. ಅಧಿಕಾರಿಗಳ ವರ್ಗಾವಣೆ ಕುರಿತು ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರ ಮೇಲೆ ಅವರಿಗೆ ವಿಶ್ವಾಸ ಇದೆಯೋ ಅವರನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಅಕ್ಟೋಬರ್ 3ಕ್ಕೆ ಪಿಎಸ್ಸೈ ಪರೀಕ್ಷೆ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ಹುದ್ದೆಗೆ ಸೆ.22ರಂದು ನಿಗದಿ ಮಾಡಿದ್ದ ಪರೀಕ್ಷೆಯನ್ನು ಪರೀಕ್ಷಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ಸೆ.28ಕ್ಕೆ ಮುಂದೂಡಲಾಗಿತ್ತು. ಆದರೆ, ಸೆ.28ರಂದೇ ಕೇಂದ್ರ ಲೋಕಸೇವಾ ಆಯೋಗದವರ ಸಾಮಾನ್ಯ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದೆ. ಆದುದರಿಂದ, ರಾಜ್ಯ ಪರೀಕ್ಷಾ ಪ್ರಾಧಿಕಾರದವರು ಅಕ್ಟೋಬರ್ 3ರಂದು ಪಿಎಸ್ಸೈ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ