‘ಧರ್ಮಸ್ಥಳ ಪ್ರಕರಣ’ ತಾರ್ಕಿಕ ಅಂತ್ಯದವರೆಗೂ ತನಿಖೆ ಮುಂದುವರಿಕೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.30: ಧರ್ಮಸ್ಥಳ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ (ಎಸ್‍ಐಟಿ) ತನಿಖೆಯು ಎಲ್ಲಿಗೆ ಹೋಗುತ್ತದೆ ಎಂದು ಹೇಳಲಾಗುವುದಿಲ್ಲ. ತಾರ್ಕಿಕ ಅಂತ್ಯ ಕಾಣುವವರೆಗೂ ವಿಚಾರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್‍ಐಟಿ ಸಂಸ್ಥೆಯ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ತಮ್ಮನ್ನು ಭೇಟಿ ಮಾಡಿ, ಪ್ರಕರಣದ ಪ್ರಗತಿಯ ಬಗೆಗೆ ಚರ್ಚಿಸಿದ್ದಾರೆ. ಸಮಾಲೋಚನೆಯ ವಿಚಾರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.
ಎಸ್‍ಐಟಿ ತಂಡಕ್ಕೆ ಈಗಾಗಲೇ ತನಿಖೆಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅದರಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ತನಿಖೆಗೆ ಕಾಲಮಿತಿ ವಿಧಿಸಿಲ್ಲ. ತ್ವರಿತವಾಗಿ ಪ್ರಕ್ರಿಯೆಗಳನ್ನು ನಡೆಸಿ ಎಂದು ಸಲಹೆ ನೀಡಬಹುದು. ಆದರೆ, ಎಲ್ಲವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿರುವುದರಿಂದ ಒತ್ತಡ ಹೇರುವುದು ಸರಿಯಲ್ಲ ಎಂದು ಜಿ.ಪರಮೇಶ್ವರ್ ಹೇಳಿದರು.
ಧರ್ಮಸ್ಥಳದಲ್ಲಿ ಉತ್ಖನನ ಮಾಡಿದಾಗ ದೊರೆತ್ತಿರುವ ಹಲವಾರು ಅಂಶಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ಕ್ಕೆ ಕಳುಹಿಸಲಾಗಿದೆ. ಸಾಕಷ್ಟು ರೀತಿಯ ವಿಶ್ಲೇಷಣೆಗಳು ನಡೆಯಬೇಕಿದೆ. ವರದಿ ಯಾವ ರೀತಿ ಇರುತ್ತದೆ ಎಂದು ನನಗೆ ಗೊತ್ತಿಲ್ಲ. ಅನಗತ್ಯವಾಗಿ ಊಹ-ಪೋಹಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಜಿ.ಪರಮೇಶ್ವರ್ ತಿಳಿಸಿದರು.
ವಿಚಾರಣಾ ಹಂತದಲ್ಲಿ ಬೇರೆ ಬೇರೆ ರೀತಿಯ ಮಾಹಿತಿಗಳು ಸಿಕ್ಕರೆ ಅವುಗಳನ್ನು ಎಸ್‍ಐಟಿ ಅಧಿಕಾರಿಗಳು ತನಿಖೆಗೊಳಪಡಿಸುತ್ತಾರೆ. ರಾಜ್ಯ ಸರಕಾರ ಯಾವುದೇ ರೀತಿಯ ನಿರ್ದೇಶನ ನೀಡುವುದಿಲ್ಲ. ಸೌಜನ್ಯ ಅವರ ತಾಯಿ ದೂರು ನೀಡಿರುವ ಬಗ್ಗೆಯೂ ಎಸ್‍ಐಟಿ ಅವರೇ ಪರಿಶೀಲನೆ ಮಾಡುತ್ತಾರೆ ಎಂದು ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.
ಬಂಧಿತ ಆರೋಪಿ ಚಿನ್ನಯ್ಯನನ್ನು ಮಹಜರು ನಡೆಸಲು ಬೆಂಗಳೂರಿಗೆ ಕರೆತರುವುದು ಸೇರಿದಂತೆ ಎಲ್ಲ ರೀತಿಯ ಪ್ರಕ್ರಿಯೆಗಳನ್ನು ಎಸ್‍ಐಟಿ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಆತನಿಗೆ ಆಶ್ರಯ ಕೊಟ್ಟವರನ್ನು ಬಂಧಿಸಬೇಕೆ? ಬೇಡವೇ? ಎಂಬುದು ಕೂಡ ಎಸ್‍ಐಟಿ ಆಧಿಕಾರಿಗಳ ವಿವೇಚನೆಗೆ ಸೇರಿದೆ. ವಿರೋಧ ಪಕ್ಷಗಳು ಹೇಳಿದಂತೆ ತನಿಖೆ ನಡೆಸುವುದಾಗಲೀ, ಕಾಲಮಿತಿ ವಿಧಿಸುವುದಾಗಲೀ ಸಾಧ್ಯವಿಲ್ಲ. ರಾಜಕೀಯಕ್ಕಾಗಿ ಅವರು ಮಾತನಾಡುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಎನ್‍ಐಎಗೆ ವಹಿಸುವುದು ಅಸಾಧ್ಯ: ‘ತನಿಖೆ ಉತ್ತಮವಾಗಿ ನಡೆಯುತ್ತಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸೇರಿದಂತೆ ಎಲ್ಲರೂ ಎಸ್‍ಐಟಿಯನ್ನು ಸ್ವಾಗತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎನ್‍ಐಎ ಸಂಸ್ಥೆಗೆ ವಹಿಸಬೇಕು ಎಂದರೆ ಅದು ಅಸಾಧ್ಯ. ನಾವು, ನೀವು ಅಥವಾ ಬೇರೆಯವರು ಹೇಳಿದಂತೆ ಆಗುವುದಿಲ್ಲ. ಎಸ್‍ಐಟಿಗೆ ನಿಯಮ ಬದ್ಧವಾದ ಕ್ರಮಗಳಿವೆ. ಅದರ ಪ್ರಕಾರವೇ ನಡೆಯುತ್ತದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.







