ಎಸ್ಐಟಿ ತಂಡದಿಂದ ಯಾವ ಅಧಿಕಾರಿಗಳೂ ಹಿಂದೆ ಸರಿದಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು : ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಎಸ್‌ಐಟಿ ತಂಡದಿಂದ ಯಾವ ಅಧಿಕಾರಿಗಳೂ ಕೂಡ ಹಿಂದೆ ಸರಿದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಎಸ್‌ಐಟಿ ತಂಡದಿಂದ ಕೆಲವು ಅಧಿಕಾರಿಗಳು ವೈಯಕ್ತಿಕ ಕಾರಣದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, "ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ. ಅವರೆಲ್ಲ ಜಬಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳು, ಅವರು ತಮ್ಮ ಕೆಲಸವನ್ನು ಮಾಡುತ್ತಾರೆ. ನನಗಾಗಲಿ, ಸರಕಾರಕ್ಕಾಗಲಿ ನಾವು ಬರುವುದಿಲ್ಲ ಎಂದು ಅವರು ಹೇಳಿಲ್ಲ" ಎಂದು ಸ್ಪಷ್ಟಪಡಿಸಿದರು.
ಪ್ರಣವ್ ಮೊಹಂತಿ ಭೇಟಿ ಮಾಡಿ ಜವಾಬ್ದಾರಿಯಿಂದ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಎಸ್‍ಐಟಿ ತಂಡದಿಂದ ವೈಯಕ್ತಿಕ ಕಾರಣ ಮುಂದಿಟ್ಟು ಇಬ್ಬರು ಐಪಿಎಸ್ ಅಧಿಕಾರಿಗಳು ಹೊರಗುಳಿಯುವುದೆಲ್ಲ ಸುಳ್ಳು. ತಂಡದ ಯಾವುದೇ ಅಧಿಕಾರಿಗಳು ತನಿಖೆ ಮಾಡುವುದಿಲ್ಲವೆಂದು ಹೇಳಿಲ್ಲ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯದ ಜನ, ಪ್ರಗತಿಪರರು ತನಿಖೆಗೆ ಒತ್ತಾಯ ಮಾಡಿದ್ದರು. ಹಲವರಿಂದ ತನಿಖೆ ಮಾಡುವಂತೆ ದೂರು ಬಂದಿದ್ದವು. ಹಾಗಾಗಿ ತನಿಖೆಗೆ ಆದೇಶ ಮಾಡಿದ್ದೇವೆ. ಎಸ್‍ಐಟಿ ತನಿಖೆಯಿಂದ ಏನಾಗಿದೆ ಎಂಬುದು ಗೊತ್ತಾಗಲಿದೆ, ಕಾದು ನೋಡೋಣ ಎಂದು ಡಾ.ಪರಮೇಶ್ವರ್ ತಿಳಿಸಿದರು.







