ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್

ಡಾ.ಜಿ.ಪರಮೇಶ್ವರ್
ಬೆಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ತನಿಖೆ ಹಂತದಲ್ಲಿದೆ. ಹೀಗಾಗಿ, ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು. ಈ ಸಂಬಂಧ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ ಎಂದು ತಿಳಿಸಿದರು.
ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಕೇಂದ್ರ ಸೇವೆಗೆ ನೇಮಕಗೊಂಡಿದ್ದಾರೆ. ಇದು ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಹೆಮ್ಮೆ ಆಗಿದೆ. ಆದರೆ, ಕೇಂದ್ರ ಕರೆದಾಗ ನಾವು ಕಳುಹಿಸುತ್ತೇವೆ ಎಂಬುದೇನೂ ಇಲ್ಲ. ಇಂತಹ ಜಾಗಕ್ಕೆ ನೇಮಕ ಮಾಡುತ್ತಿದ್ದೇವೆ ಎಂದು ಕೇಂದ್ರ ಹೇಳಬೇಕು. ಆಗ ಪ್ರಕ್ರಿಯೆ ನಡೆಯುತ್ತಿದೆ. ಈಗಲೇ ಅವರು ಹೋಗುತ್ತಿದ್ದಾರೆ ಎಂದು ಹೇಳುವುದು ಸೂಕ್ತವಲ್ಲ ಎಂದು ಸಚಿವರು ಹೇಳಿದರು.
ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವರದಿ ಕೊಡುವವರೆಗೂ ಆ ಬಗ್ಗೆ ಮಾತನಾಡಲು ಹೋಗಲ್ಲ. ತನಿಖೆ ನಡೆಯುವಾಗ ನಾವು ಮಾತಾಡೋದು ಸಮಂಜಸ ಅಲ್ಲ ಎಂದೂ ಪರಮೇಶ್ವರ್ ಉಲ್ಲೇಖಿಸಿದರು.





