ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರನ್ನು ಕೇಳಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

ಜಿ.ಪರಮೇಶ್ವರ್
ಬೆಂಗಳೂರು : ನಾನು ಯಾವತ್ತೂ ಕೂಡ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.
ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆ ಕುರಿತಂತೆ ನಿಮಗೆ ಯಾರು ಹೇಳಿದರು. ಒಂದು ವೇಳೆ ನಿಮ್ಮ ಕಿವಿಗೆ ಬಿತ್ತು ಅಥವಾ ಯಾರೋ ಹೇಳಿದರು ಎಂಬ ಮಾತು ಬಂದಾಗ ನನ್ನನ್ನು ನೇರವಾಗಿ ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದಲ್ಲವೆ?. ಸುದ್ದಿ ಮಾಡುವ ಮೊದಲು ನನ್ನನ್ನು ನೇರವಾಗಿ ಕೇಳಬಹುದಲ್ಲವೇ? ಎಂದರು.
ನಾನು 30 ವರ್ಷದಿಂದ ನಿಮ್ಮೊಂದಿಗೆ ಸಂಯಮದಿಂದ ನಡೆದುಕೊಂಡಿದ್ದೇನೆ. ನೀವು ಅಷ್ಟೇ ಗೌರವಿಸಿದ್ದೀರಿ. ಇದಕ್ಕೆ ನಾನು ಅಭಾರಿಯಾಗಿದ್ದೇನೆ. ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವುದು ಒಳ್ಳೆಯದಾಗಿ ಕಾಣಿಸುವುದಿಲ್ಲ, ಶೋಭೆ ತರುವುದಿಲ್ಲ ಎಂದರು.
ನಾನು ನನ್ನ ಶ್ರೀಮತಿಯವರು ಸೇರಿದಂತೆ ಯಾರ ಬಳಿಯೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಖಾತೆ ಬದಲಾಯಿಸುವಂತೆ ಆಪ್ತರ ಬಳಿ ಹೇಳಿದರು, ಮುಖ್ಯಮಂತ್ರಿಯವರ ಬಳಿ ಕೇಳಿದರು. ಅವರು ಸುಮ್ಮನೆ ಇರಿ ಎಂದು ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದನ್ನು ಯಾರು ಹೇಳಿದರು. ಸುದ್ದಿ ಮಾಡುವ ಮೊದಲೇ ಸ್ಪಷ್ಟನೆ ಪಡೆದುಕೊಳ್ಳಬೇಕಿತ್ತು ಎಂದು ಹೇಳಿದರು.
ನಮ್ಮನ್ನು ಅಭಿಮಾನಿಗಳು, ಜನ ಅನುಕರಿಸುವವರು ಇದ್ದಾರೆ. ಕ್ಷೇತ್ರದ ಮತದಾರರು ಏನೆಂದುಕೊಳ್ಳುತ್ತಾರೆ. ಮುಂದೆ ಈ ರೀತಿ ಊಹಾಪೋಹಾ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ ನನ್ನನ್ನು ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ನಾನು ಯಾವತ್ತು ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ. ಬೆಂಗಳೂರಿನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಇಂತಹ ಘಟನೆಗಳಾಗಬಾರದು. ಈ ಘಟನೆಯಿಂದ ನಾವು ನೋವನ್ನು ಅನುಭವಿಸುತ್ತಿದ್ದೇವೆ. ಇಂತಹ ಸವಾಲುಗಳನ್ನು ಎದುರಿಸಬೇಕು. ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರು ಸೇರಿದಂತೆ ಯಾರ ಬಳಿಯೂ ಮಾತನಾಡೇ ಇಲ್ಲ. ಇದೆಲ್ಲ ಸತ್ಯಕ್ಕೆ ದೂರವಾಗಿದ್ದು. ಈ ವಿಚಾರವನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.