ಸಾಂವಿಧಾನಿಕ ಚೌಕಟ್ಟು ಮೀರುವ ಯಾವುದೇ ವ್ಯಕ್ತಿ, ಪ್ರಕರಣಗಳ ವಿರುದ್ಧ ರಾಜಿ ಇಲ್ಲದೆ ಕ್ರಮ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ರಾಜ್ಯ ಪೊಲೀಸ್ ಮಹಾನಿರ್ದೇಶಕರ ವ್ಯಾಪ್ತಿಯಲ್ಲಿ ಬರುವ ಆರು ಕಮೀಷನರೇಟ್‍ಗಳ ಸ್ಥಿತಿಗತಿಗಳ ಕುರಿತು ಚರ್ಚಿಸಿ, ಸಾಂವಿಧಾನಿಕ ಚೌಕಟ್ಟನ್ನು ಮೀರುವ ವ್ಯಕ್ತಿ ಮತ್ತು ಪ್ರಕರಣಗಳ ವಿರುದ್ಧ ಯಾವುದೇ ರಾಜಿ ಇಲ್ಲದೆ ಕ್ರಮ ಜರುಗಿಸಬೇಕು’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶನಿವಾರ ನಗರದ ನೃಪತುಂಗ ರಸ್ತೆಯಲ್ಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಸಹಿತ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಇಲಾಖೆಯ ಕುರಿತು ಮಾಹಿತಿ, ವಿನಿಮಯದ ಔಪಚಾರಿಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ಸಭೆಯಲ್ಲಿ ರಾಜ್ಯದ ಅಪರಾಧ ಪ್ರಕರಣಗಳು, ಸಿಬ್ಬಂದಿ ನೇಮಕಾತಿ, ಕಾನೂನು ಸುವ್ಯವಸ್ಥೆ, ಮಾದಕ ವಸ್ತುಗಳ ನಿಯಂತ್ರಣ ಮುಂತಾದ ವಿಷಯಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಸಲಾಯಿತು. ಕಮೀಷನರೇಟ್ ವ್ಯಾಪ್ತಿಯಲ್ಲಿನ 16 ಯೂನಿಟ್‍ಗಳ ಸ್ಥಿತಿಗತಿಗಳ ಕುರಿತು ಪ್ರತಿದಿನ 3 ಯೂನಿಟ್‍ಗಳ ವಸ್ತುಸ್ಥಿತಿ ಪರಿಶೀಲನೆ ಮಾಡಿ ವರದಿ ನೀಡಬೇಕು ಎಂದು ನಿರ್ದೇಶಿಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ನನಗೆ ಗೃಹ ಇಲಾಖೆಯಂತಹ ದೊಡ್ಡ ಜವಾಬ್ದಾರಿ ವಹಿಸಲಾಗಿದೆ. ಪೊಲೀಸ್ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ಹಿಂದಿನ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಕೈಗೊಂಡ ಕಾರ್ಯಕ್ರಮಗಳು ಯಾವುವು?, ಹೇಗೆ ಮುಂದುವರೆಸಬೇಕು ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಭೆಯಲ್ಲಿ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಸೇರಿದಂತೆ ಇಲಾಖೆಯ ಎಲ್ಲ ಹಿರಿಯ ಐಪಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ದ್ವೇಷ ಭಾಷಣ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ‘ಮಾದಕ ವಸ್ತುಗಳ (ಡ್ರಗ್) ಮಾಫಿಯಾ, ಮಹಿಳೆಯರ ಸುರಕ್ಷತೆ, ಸಂಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಕೆಲ ಸಲಹೆ, ಸೂಚನೆ ನೀಡಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ಯಾರೇ ಇದ್ದರೂ ಕಾನೂನಿನ ಚೌಕಟ್ಟು ಮೀರಿದರೆ ಕ್ರಮ ಕೈಗೊಳ್ಳುವುದು ನಿಶ್ಚಿತ. ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹುಟ್ಟಿಸುವ ರೀತಿ ಭಾಷಣ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸರಕಾರಕ್ಕೆ ಮುಜುಗರವಾಗುವಂತಹ ನಡವಳಿಕೆಗಳನ್ನು ಸಹಿಸುವುದಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.
ರೌಡಿ ನಿಗ್ರಹ ಪಡೆ ರಚನೆಗೆ ನೀಲನಕ್ಷೆ ಸಿದ್ಧ: ‘ತಾಲೂಕು ಮಟ್ಟದಲ್ಲಿ ರೌಡಿ ನಿಗ್ರಹ ಪಡೆ ರಚಿಸುವ ಸಂಬಂಧ ಈಗಾಗಲೇ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಮುಂದಿನ ದಿನದಲ್ಲಿ ಇದರ ಬಗ್ಗೆ ವಿವರವಾಗಿ ಹೇಳುತ್ತೇನೆ’ ಎಂದು ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.






