ಶೀಘ್ರದಲ್ಲೇ ಕಾನೂನಿನ ಚೌಕಟ್ಟಿನೊಳಗೆ RSS : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರೆಸ್ಸೆಸ್)ದ ಇತಿಹಾಸವನ್ನು ರಾಜ್ಯ ಸರಕಾರವು ಕೂಲಂಕಶವಾಗಿ ಅಧ್ಯಯನ ನಡೆಸುತ್ತಿದೆ. ಆದಷ್ಟು ಶೀಘ್ರದಲ್ಲೇ ಆರೆಸ್ಸೆಸ್ ಅನ್ನು ಕಾನೂನಿನ ಚೌಕಟ್ಟಿನೊಳಗೆ ತರಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಘಟನೆಯ ನೋಂದಣಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದಿದ್ದ ಪತ್ರಕ್ಕೆ ಯಾವುದೇ ಉತ್ತರ ಬಂದಿಲ್ಲ ಹಾಗೂ ಈ ವಿಚಾರವನ್ನು ನಾವು ಸೂಕ್ತ ರೀತಿಯಲ್ಲಿಯೇ ನಿಭಾಯಿಸುತ್ತೇವೆ ಎಂದರು.
ನಾವು ಏನೇ ಮಾಡಿದರೂ ಅದು ಕಾನೂನು ಚೌಕಟ್ಟಿನೊಳಗೆ ಇರಬೇಕಾಗುತ್ತದೆ. ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಆರೆಸ್ಸೆಸ್ ಮತ್ತು ಅದರ ಇತಿಹಾಸವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸರಕಾರಕ್ಕೆ ಕಾಲಾವಕಾಶದ ಅಗತ್ಯವಿದೆ. ಪ್ರಸ್ತುತ ಅವರು(ಆರೆಸ್ಸೆಸ್) ಕಾನೂನು ಚೌಕಟ್ಟಿನ ಹೊರಗಿದ್ದಾರೆ. ನಾನು ಅವರನ್ನು ಅದರೊಳಗೆ ತರುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಇದೇ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ಇತರರಿಗೆ ದೇಶಭಕ್ತಿ ಅಥವಾ ದೇಶದ್ರೋಹದ ಪ್ರಮಾಣಪತ್ರಗಳನ್ನು ವಿತರಿಸಲು ಆರೆಸ್ಸೆಸ್‍ಗೆ ಇರುವ ಅಧಿಕಾರವಾದರೂ ಏನು ಎಂದು ಪ್ರಶ್ನಿಸಿದರು.
ಇತ್ತೀಚೆಗಷ್ಟೇ ಮೋಹನ್ ಭಾಗವತ್ ಅವರು ಜೆನ್ ಝೀ ಯುವಜನತೆಯನ್ನು ಭೇಟಿಯಾಗಿದ್ದರಂತೆ. ಮೊದಲು ಅವರನ್ನು ಥಳಿಸಿ, ಈಗ ಬೆಂಬಲಿಸುವ ನಾಟಕವಾಡುತ್ತಿದ್ದಾರೆಯೇ? ಅವರ ಸಂಘಟನೆಯೇ ಅಧಿಕೃತವಾಗಿ ನೋಂದಣಿಯಾಗಿಲ್ಲ, ಆದರೆ ಅವರು ಇತರರಿಗೆ ಪ್ರಮಾಣಪತ್ರ ನೀಡಲು ಬರುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.






