ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಸಿ.ಪಿ. ಯೋಗೇಶ್ವರ್

ಸಿ.ಪಿ.ಯೋಗೇಶ್ವರ್
ಬೆಂಗಳೂರು: ‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಸಾಕು’ ಎಂದು ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬುದು ನಮ್ಮ ಜಿಲ್ಲೆಯ ಜನತೆ ಹಾಗೂ ಶಾಸಕರ ಅಭಿಪ್ರಾಯ. ಈ ಸಂಬಂಧ ವರಿಷ್ಠರು ಸೂಕ್ತ ತೀರ್ಮಾನ ಕ್ಯಗೊಳ್ಳುವ ವಿಶ್ವಾಸವಿದೆ. ಆದರೆ, ಏನೇ ಆದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ’ ಎಂದು ವಿವರಣೆ ನೀಡಿದರು.
‘ಅಧಿಕಾರ ಹಂಚಿಕೆಯ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿ ಒಪ್ಪಂದಗಳಾಗಿವೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರಿ ಆರು ತಿಂಗಳಾಗಿವೆ ಎಂದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೆ ಅವರಿಗೆ ಮೊದಲು ಅವಕಾಶ ಸಿಗಲಿ. ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬುದು ಆಸೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ನನಗೆ ಹಳೆಯ ಪಕ್ಷವಾದರೂ ಈಗ ಪಕ್ಷಕ್ಕೆ ಇತ್ತೀಚೆಗಷ್ಟೇ ಬಂದಿದ್ದೇನೆ. ಮುಂದೆ ಪಕ್ಷಗಳ ವಿಚಾರದ ಬಗ್ಗೆ ಗಮನ ಹರಿಸುತ್ತೇನೆ ಎಂದ ಅವರು, ಕಣ್ವನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇನೆ, ಇದನ್ನು ತಡೆಗಟ್ಟಬೇಕು ಎಂದರು.







