ಹೊಂದಾಣಿಕೆ ಮಾಡಿಕೊಳ್ಳದ ನಾನೇ ನಿಜವಾದ ವಿಪಕ್ಷ ನಾಯಕ: ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.9: ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದ ನಾನೇ ನಿಜವಾದ ವಿರೋಧ ಪಕ್ಷದ ನಾಯಕ. ಹೀಗಾಗಿ ನನಗೆ ವಿಧಾನಸಭಾ ಉಪಾಧ್ಯಕ್ಷರ ಪಕ್ಕದಲ್ಲೇ ಆಸನ(ಕುರ್ಚಿ) ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶೇಷ ಬೇಡಿಕೆಯನ್ನಿಟ್ಟ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ಆರಂಭಕ್ಕೆ ಮುನ್ನ ಮಾತನಾಡಿದ ಯತ್ನಾಳ್ ಅವರು, ನಾನು ಐದು ಬಾರಿ ಆಯ್ಕೆಯಾಗಿರುವ ಹಿರಿಯ ಸದಸ್ಯ. ಆದರೆ, ನನ್ನ ಹಿರಿತನವನ್ನು ಪರಿಗಣಿಸದೆ ನನಗೆ ಕೊನೆಯ ಸಾಲಿನಲ್ಲಿ ಆಸನ (ಕುರ್ಚಿ) ವ್ಯವಸ್ಥೆ ಮಾಡಲಾಗಿದೆ. ಇದು ನಮ್ಮ ಹಿರಿತನಕ್ಕೆ ಮಾಡುವ ಅವಮಾನ ಎಂದು ದೂರಿದರು. ಇದಕ್ಕೆ ಮತ್ತೊರ್ವ ಸದಸ್ಯ ಎಸ್.ಟಿ. ಸೋಮಶೇಖರ್ ಧ್ವನಿಗೂಡಿಸಿದರು.
ರಾಜಕೀಯದಲ್ಲಿ ಸಿನಿಯರ್-ಜೂನಿಯರ್ ಇಲ್ಲ :
ವಿಧಾನಸಭೆಯಲ್ಲಿ ಹಿಂದಿನ ಸಾಲಿನಲ್ಲಿ ಆಸನ ನೀಡಿದ್ದಕ್ಕಾಗಿ ಯತ್ನಾಳ್ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್ ಅವರು, ‘ನಮಗೆ ಹಿಂದಿನ ಸಾಲಿನಲ್ಲಿ ಆಸನ ನೀಡಿದ್ದೀರಿ ಎಂದು ಕಳೆದ ಬಾರಿ ನಮ್ಮ ಗಮನಕ್ಕೆ ತರಲಾಗಿತ್ತು. ಆದರೆ, ರಾಜಕೀಯದಲ್ಲಿ ಸೀನಿಯರ್ ಹಾಗೂ ಜೂರಿಯರ್ ಎಂಬುದು ಇಲ್ಲ. ಅಧಿಕಾರ ಇದ್ದವರೇ ಸೀನಿಯರ್ ಹಾಗೂ ಅಧಿಕಾರ ಇಲ್ಲದವರು ಜೂನಿಯರ್. ಸದನದಲ್ಲಿ ಕುರ್ಚಿ ನೀಡುವಾಗ ಹಿರಿತನ ನೋಡಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
‘ನೀವು(ಯತ್ನಾಳ್) ಬಿಜೆಪಿ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಮುಂದಿನ ಸ್ಥಾನದಲ್ಲಿ ಆಸನ (ಕುರ್ಚಿ) ನೀಡಲಾಗಿತ್ತು. ನಿಮಗೆ ಬೇಕಾದಾಗ ಇಲ್ಲಿ ಬರುವುದು ಬೇಡವಾದಾಗ ಬಿಟ್ಟು ಅಲ್ಲಿ ಹೋದರೆ ಏನು ಮಾಡೋದು?’ ಎಂದು ಖಾರವಾಗಿ ಪ್ರಶ್ನಿಸಿದ ಸ್ಪೀಕರ್ ಖಾದರ್, ಯತ್ನಾಳ್ ಕಾಲೆಳೆದರು. ಬಳಿಕ ಯತ್ನಾಳ್ ಪ್ರತಿಕ್ರಿಯೆ ನೀಡಿ, ‘ನಾನು ಬೇಕು ಎಂದಾಗ ಬರುವುದು, ಬಿಡುವುದು ಇಲ್ಲಿ ಯಾವುದೇ ವಿಚಾರವಿಲ್ಲ. ನಾನೇ ಬಿಜೆಪಿಯ ನಿಜವಾದ, ನಿಷ್ಠಾವಂತ ಕಾರ್ಯಕರ್ತ. ಈ ಸದನದಲ್ಲಿ ನಾನೇ ನಿಜವಾದ ವಿರೋಧ ಪಕ್ಷದ ನಾಯಕ ಎಂದರು.
ನಾನು ಯಾವುದೇ ಹೊಂದಾಣಿ ಮಾಡಿಕೊಳ್ಳುವ ಗಿರಾಕಿಯಲ್ಲ. ನಾನು ಯಾರ ಜೊತೆಗೂ ಯಾವುದೇ ರೀತಿಯಲ್ಲಿಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಮುಖ್ಯಮಂತ್ರಿಯ ಕಚೇರಿಗೆ ಹೋಗಿಲ್ಲ. ಯಾವ ಸಚಿವರ ಬಳಿಯೂ ದಯಾಪರನಾಗಿ ಕೇಳಿಕೊಂಡಿಲ್ಲ. ನಾನು ನಿಜವಾದ ವಿರೋಧ ಪಕ್ಷದ ನಾಯಕ. ಹೀಗಾಗಿ ನನಗೆ ಮೊದಲನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.







