ಬಿಜೆಪಿ ತೊರೆಯುವ ಊಹಾಪೋಹಗಳಿಗೆ ತೇಜಸ್ವಿನಿ ಅನಂತಕುಮಾರ್ ಸ್ಪಷ್ಟನೆ

ಬೆಂಗಳೂರು: ಮಾಜಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಊಹಾಪೂಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.
ಬಿಜೆಪಿ ನಾಯಕರ ನಡೆಗಳಿಂದ ತೇಜಸ್ವಿನಿ ಅನಂತಕುಮಾರ್ ಅವರು ಬೇಸತ್ತಿದ್ದು, ಲೋಕಸಭಾ ಚುನಾವಣೆಗೆ ಮುನ್ನ ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಅದರಲ್ಲೂ, ಜಗದೀಶ್ ಶೆಟ್ಟರ್ ಅವರ ಮೂಲಕ ತೇಜಸ್ವಿನಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳೂ ತೇಲಿ ಬಂದಿದ್ದವು.
ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಟಿಕೆಟ್ ತಪ್ಪಿದ್ದರಿಂದ ಅನಂತಕುಮಾರ್ ಅವರ ಅಭಿಮಾನಿಗಳು ಅಸಮಾಧನವನ್ನು ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ತೇಜಸ್ವಿನಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ತೇಜಸ್ವಿನಿ, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಕರೆ ನೀಡಿದ್ದಾರೆ.
“”ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ. ಪಕ್ಷ ಮತ್ತು ಸಿದ್ಧಾಂತದೊಂದಿಗೆ ರಾಜಿಯಾಗಲ್ಲ” ಎಂದು ತೇಜಸ್ವಿನಿ ಅವರು ಟ್ವೀಟ್ ಮಾಡಿದ್ದಾರೆ.







