ಬಿಜೆಪಿಯವರು ಇಷ್ಟೊಂದು ದಡ್ಡರು ಅಂತ ನನಗೆ ಗೊತ್ತಿರಲಿಲ್ಲ: ಸಚಿವ ಮಧು ಬಂಗಾರಪ್ಪ
► ''ಮಕ್ಕಳ ಹಿತದೃಷ್ಟಿಯಿಂದ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದೇವೆ''

ಶಿವಮೊಗ್ಗ: ಬಿಜೆಪಿಯವರು ಇಷ್ಟೊಂದು ದಡ್ಡರು ಎಂದು ನನಗೆ ಗೊತ್ತಿರಲಿಲ್ಲ. ಅವರು ಪುಸ್ತಕ ಓದಿ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಚಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯಂತಹ ದಡ್ಡರಿಲ್ಲ. ಅವರು ಪುಸ್ತಕ ಓದಿ ಬರಲಿ. ಇಷ್ಟೊಂದು ದಡ್ಡರು ಅಂತ ನನಗೆ ಗೊತ್ತಿರಲಿಲ್ಲ. ದಡ್ಡರಿಗೆ, ಸೋತವರಿಗೆ ಉತ್ತರ ಕೊಡಬೇಕಾಗಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದೇವೆ ಎಂದರು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಸಮಸ್ಯೆ ಇಲ್ಲ. ಸಣ್ಣಪುಟ್ಟ ಹಾನಿಯಾಗಿದ್ದು, ಪ್ರಕೃತಿ ವಿಕೋಪ ಕುರಿತು ಪರಿಶೀಲನೆ ಮಾಡಿದ್ದೇನೆ, ಜಿಲ್ಲೆಯಲ್ಲಿ ಮೇಜರ್ ಸಮಸ್ಯೆ ಆಗಿಲ್ಲ. ಸಣ್ಣಪುಟ್ಟ ಹಾನಿಗಳು ಆಗಿವೆ. ಕೆಲವೆಡೆ ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿವೆ ಎಂದರು.
ಸಿಎಂ ಬದಲಾವಣೆ, ಸರ್ಕಾರ ಉರುಳಿಸುವ ವಿಚಾರದ ಬಗ್ಗೆ ಮಾತನಾಡಿ, ಇದೆಲ್ಲಾ ಮಾಧ್ಯಮದವರ ಸೃಷ್ಟಿ ಹೊರತು ಪಕ್ಷದಲ್ಲಿ ಯಾವುದೇ ಬೆಳವಣಿಗೆಯಿಲ್ಲ. ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.







