ಆಮಿಷಕ್ಕೆ ಒಳಗಾಗಿ ಸಿದ್ಧಾಂತವನ್ನೆ ಬದಲಾಯಿಸುವ ಹೀನ ಸಂಸ್ಕೃತಿ ನನ್ನದಲ್ಲ: ಬಿ.ಕೆ. ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್
ಬೆಂಗಳೂರು: ನಿಮ್ಮ ಹಾಗೆ ಅಧಿಕಾರ, ಆಸೆ, ಆಮಿಷಕ್ಕೆ ಒಳಗಾಗಿ ಸಿದ್ಧಾಂತವನ್ನೆ ಬದಲಾಯಿಸಿ, ಬೆಳಸಿದವರನ್ನೆ ದೂರುತ್ತಾ ರಾಜಕೀಯ ನಡೆಸುವ ಹೀನ ಸಂಸ್ಕೃತಿಯಂತೂ ನನ್ನದಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಸಂಸ್ಕೃತಿ, ಮಾತೆ ಎನ್ನುತ್ತಾ ಮಹಿಳೆಯರ ರಕ್ಷಣೆಯ ನಕಲಿ ಗುತ್ತಿಗೆ ಪಡೆದಿದ್ದ ಬಿಜೆಪಿಯಿಂದ, ಇತ್ತೀಚಿಗೆ ಉಪ ಗುತ್ತಿಗೆ ಪಡೆದಿರುವಂತೆ ವರ್ತಿಸುತ್ತಿರುವ ಈ ಛಲವೇ ಇಲ್ಲದ ಛಲವಾದಿ ನಾರಾಯಣಸ್ವಾಮಿ ಪುಂಖಾನುಪುಂಖವಾಗಿ ಮಹಿಳೆಯರ ಬಗ್ಗೆ ಮಾತನಾಡುವ ಕನಿಷ್ಟ ನೈತಿಕತೆಯನ್ನಾದರೂ ಉಳಿಸಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರನ್ನ ಪ್ರತಿ ಕ್ಷಣವೂ ಅವಮಾನಿಸುವ, ಎರಡನೇ ದರ್ಜೆಯಾಗಿ ಕಾಣುವ ಪ್ರಧಾನಿಯಿಂದ ಹಿಡಿದು ರಾಜ್ಯದ ಬಿಜೆಪಿಯ ‘ಹ್ಯಾಬಿಚುವಲ್ ಅಫೆಂಡರ್’(ಪದೇ ಪದೇ ಅಪರಾಧಗಳನ್ನು ಮಾಡುವವರು) ಗಳಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
‘ಚಿಂತಕರ ಚಾವಡಿ’ ಎನಿಸಿಕೊಂಡಿರುವ ಸದನದಲ್ಲಿ ನಾರಾಯಣಸ್ವಾಮಿ ಸಮ್ಮುಖದಲ್ಲೇ, ಬಿಜೆಪಿಯ ಸದಸ್ಯನೊಬ್ಬ ಮಹಿಳಾ ಸಚಿವರಿಗೆ ಬಳಸಿದ ಅತ್ಯಂತ ಹೊಲಸು, ಅಸಭ್ಯ ಹಾಗೂ ಅಸಂಸದೀಯ ಪದ ಕೇಳಿಯೂ ತೇಪೆ ಮುಖ ಹಾಕಿಕೊಂಡು ಕೂತಾಗ ಮಹಿಳಾ ನಕಲಿ ರಕ್ಷಣೆಯ ಸಬ್ ಕಾಂಟ್ರ್ಯಕ್ಟರ್(ಉಪ ಗುತ್ತಿಗೆ) ಗೆ ರಿನಿವಲ್(ನವೀಕರಣ) ಸಿಕ್ಕರಲಿಲ್ವಾ? ಅಥವಾ ಆಗ ಇಡೀ ಮಹಿಳೆಯರ ಕುಲದ ಗೌರವಕ್ಕೆ ಅಪಮಾನಿಸಲಿಲ್ವಾ? ಆಗ ಪ್ರಶ್ನೆ ಮಾಡುವ ಧೈರ್ಯ ಅಥವಾ ‘ಛಲ’ ಇರಲಿಲ್ವೇ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಆಪರೇಷನ್ ಸಿಂಧೂರ’ದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸಿದೇ ಭಯೋತ್ಪಾದಕರ ವಿರುದ್ಧ ಹೋರಾಡಿ ನಾಯಕತ್ವ ನೀಡಿದ, ನಮ್ಮ ಹೆಮ್ಮೆಯ ಕರ್ನಲ್ ಸೋಫಿಯಾ ಖುರೇಷಿಯ ಬಗ್ಗೆ ಬಿಜೆಪಿಯ ಸಚಿವನೇ ‘ಭಯೋತ್ಪಾದಕರ ಸಹೋದರಿ’ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ಎಲ್ಲಿ ಅಡಗಿತ್ತು ಈ ಉತ್ತರ ಕುಮಾರನ ಪೌರುಷ? ಸುಪ್ರೀಂಕೋರ್ಟ್ ಸ್ವಯಂಕೃತ ದೂರು ದಾಖಲಿಸಿಕೊಂಡು ಛೀಮಾರಿ ಹಾಕಿದರೂ ಇಲ್ಲಿವರೆಗೂ ಬಿಜೆಪಿಯವರು ತುಟಿ ಬಿಚ್ಚುತ್ತಿಲ್ಲ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ದೇಶದ ರಾಷ್ಟ್ರಪತಿಗಳಿಂದಲೇ ಅತ್ಯುತ್ತಮ ಅಧಿಕಾರಿ ಎಂದು ಶ್ಲಾಘನೆ ಪಡೆದ ಕಲಬುರಗಿಯ ಜಿಲ್ಲಾಧಿಕಾರಿಯನ್ನು ಬಿಜೆಪಿ ಪಕ್ಷದ ಪರಿಷತ್ ಸದಸ್ಯ ‘ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತಾರೆ’ ಎಂದು ಅವರ ಆತ್ಮಸ್ಥೈರ್ಯವನ್ನೆ ಕುಗ್ಗಿಸಿ ಅವಮಾನಿಸಿದಾಗ ಕನಿಷ್ಟಪಕ್ಷ ಖಂಡಿಸುವ ಧೈರ್ಯವಾದರೂ ನನ್ನಲ್ಲಿ ಉಳಿಸಿಕೊಂಡಿಲ್ಲ ಎಂದು ಸಾಬೀತು ಮಾಡಿದ್ದು ಮರೆತಂತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಉನ್ನತ ಸ್ಥಾನದಲ್ಲಿ ಮಹಿಳಾ ಅಧಿಕಾರಿಯನ್ನು ‘ರಾತ್ರಿ ಸರಕಾರದ ಕೆಲಸ, ಹಗಲು ಸಿದ್ದರಾಮಯ್ಯನವರ ಕೆಲಸ ಮಾಡುತ್ತಾರೆʼ ಎಂದು ಅತ್ಯಂತ ಕೀಳು ಮನಸ್ಥಿತಿಯ ಮಾತುಗಳನ್ನಾಡಿದ ಬಿಜೆಪಿಯ ಪರಿಷತ್ ಸದಸ್ಯನ ಮಾತನ್ನು ಕೇಳಿ ಗಹಗಹಿಸಿ ನಕ್ಕ ನಿಮ್ಮ ಹೀನ ಮನಸ್ಥಿತಿ ರಾಜ್ಯದ ಜನ ಮರೆತಿಲ್ಲ. ಹೊಲಸು ಮಾತುಗಳನ್ನು ಕೇಳಿಯೂ ಖಂಡಿಸದೆ ಯಾವ ‘ಕೇಶವನ ಕೃಪದ’ ಮೂಲೆಯಲ್ಲಿ ಅಡುಗಿ ಕುಳಿತುಕೊಂಡಿದ್ರಿ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಗೌರವ ನೀಡುವುದನ್ನ ಬಿಜೆಪಿಯ ಮನುವಾದಿ ಮನಸ್ಥಿತಿಯವರಿಂದ ಕಲಿಯುವ ದಾರಿದ್ರ್ಯ ನನಗೆ ಬಂದಿಲ್ಲ. ನನ್ನ ಹಿನ್ನಡೆ ಮುನ್ನಡೆಯ ಬಗ್ಗೆ ಬಿಜೆಪಿ ಪಕ್ಷದವರು ಹೆಚ್ಚು ತಲೆಕೆಡಿಸಿಕೊಂಡಿರುವಂತಿದೆ. ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ ಮಾನ ಸಿಗಲು ನಿಮ್ಮಂತೆ ಬಳಸಿ ಬಿಸಾಡಿದ ಚೆಡ್ಡಿ ಹೊತ್ತು ತಿರುಗಿದಂತೆ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಹಿನ್ನಡೆ ಯಾವತ್ತೂ ಆಗುವುದಿಲ್ಲ, ಸೈದ್ದಾಂತಿಕ ಬದ್ಧತೆ ಸತ್ಯ, ಪ್ರಾಮಾಣಿಕತೆ, ಪಕ್ಷ ನಿಷ್ಠೆಗೆ ಯಾವತ್ತೂ ಸ್ಥಾನಮಾನ ಬೇಕಾಗಿಲ್ಲ, ಸಾಮಾಜಿಕ ಬದ್ದತೆ, ಎದೆಗಾರಿಕೆ ಇರಬೇಕು. ಅದು ನನ್ನಲ್ಲಿ ಹುಟ್ಟಿನೊಂದಿಗೆ ಬಂದಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.







