ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ‘ನಾನು ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿದ್ದರೂ ವೈಯಕ್ತಿಕವಾಗಿ ನನಗೆ ಚುನಾವಣೋತ್ತರ ಸಮೀಕ್ಷೆ(ಎಕ್ಸಿಟ್ ಪೋಲ್)ಗಳ ಮೇಲೆ ನಂಬಿಕೆ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಮ್ಮ ರಾಜ್ಯದಲ್ಲಿ ನಾನು ಏನು ಮಾಡಿದ್ದೆ, ಯಾವ ರೀತಿ ಎಕ್ಸಿಟ್ ಪೋಲ್ ಗಳು ಬಂದವು ಎಂಬುದು ನನಗೆ ಗೊತ್ತಿದೆ. ಯಾರು ಕ್ಷೇತ್ರಗಳಲ್ಲಿ ಸುತ್ತಾಡಿರುತ್ತಾರೊ ಅವರಿಗೆ ಮಾತ್ರ ವಾಸ್ತವಾಂಶ ತಿಳಿದಿರುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾದರಿಗಳು ಅಲ್ಪಪ್ರಮಾಣದ್ದಾಗಿರುತ್ತದೆ. ಅದು ಇಡೀ ರಾಜ್ಯದ ಚಿತ್ರಣವನ್ನು ನಿರ್ಧರಿಸುವುದಿಲ್ಲ ಎಂದು ಅವರು ತಿಳಿಸಿದರು.
ಪಕ್ಷ ಹೇಳಿದ ಕೆಲಸ ಮಾಡಬೇಕಾಗುತ್ತದೆ: ಕೆಲ ರಾಜ್ಯಗಳಲ್ಲಿ ನೇರಹಣಾಹಣಿ ಇದ್ದು, ಆ ರಾಜ್ಯಗಳ ಶಾಸಕರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಗೊತ್ತಿಲ್ಲ. ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಪಕ್ಷ ಹೇಳಿದ ಕೆಲಸ ಮಾಡಬೇಕಾಗುತ್ತದೆ. ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ ಎಂದು ತಿಳಿಸಿದರು.
ಶಾಸಕರ ರಕ್ಷಣೆ ಜವಾಬ್ದಾರಿ ನೀಡಿಲ್ಲ: ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸ ನನಗಿದೆ. ಶಾಸಕರು ಎಲ್ಲೂ ಹೋಗುವುದಿಲ್ಲ. ಅವರನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಆ ಬಗ್ಗೆ ನನಗೆ ಇದುವರೆಗೂ ಯಾವುದೇ ಜವಾಬ್ದಾರಿಯೂ ನೀಡಿಲ್ಲ. ತೆಲಂಗಾಣ ಸೇರಿದಂತೆ ಕೆಲವು ಕಡೆ ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಮ್ಮ ಪಕ್ಷದವರು ಸ್ಥಳೀಯ ಮಟ್ಟದಲ್ಲೆ ಇದನ್ನು ನಿಭಾಯಿಸುತ್ತಾರೆ ಎಂದು ಶಿವಕುಮಾರ್ ಕೇಳಿದರು.
ಇನ್ಫೋಸಿಸ್ ನಾರಾಯಣ ಮೂರ್ತಿ ಉಚಿತ ಕೊಡುಗೆಗಳನ್ನು ಟೀಕೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾರಾಯಣ ಮೂರ್ತಿ ಅವರ ಸಲಹೆ ಜನರ ಅಭಿವೃದ್ಧಿಯ ಭಾಗವಾಗಿದೆ. ಅಂತಿಮವಾಗಿ ಸರಕಾರದ ನಿರ್ಧಾರ ಅಂತಿಮ. ಸರಕಾರ ರೈತರು, ಬಡವರಿಗೆ ನೆರವಾಗಬೇಕು. ಬೆಲೆ ಏರಿಕೆ ಸಮಸ್ಯೆಯನ್ನು ಜನಸಾಮಾನ್ಯರು ಹೇಗೆ ಎದುರಿಸಬೇಕು. 70 ರೂ. ಇದ್ದ ಪೆಟ್ರೋಲ್ ಬೆಲೆ 110 ರೂ. ಆಗಿದೆ ಇಂತಹ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡಬೇಕು? ಎಂದು ಪ್ರಶ್ನಿಸಿದರು.







