ಶಾಸಕ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್
ಕನಕಪುರ: ಬೇರೆಯವರ ಮುಂದೆ ಮಂಡಿಯೂರುವುದು ಕನಕಪುರದವರ ರಕ್ತದಲ್ಲಿ ಇಲ್ಲ. ಹೀಗಾಗಿ, ನಾನು ಕೇಂದ್ರ ಸಚಿವರ ಬಳಿ ಹೋಗಿ ಈಡಿ, ಸಿಬಿಐ ಪ್ರಕರಣ ಹಿಂಪಡೆಯಬೇಕು ಎಂದು ದುಂಬಾಲು ಬೀಳುತ್ತಿರುವುದಾಗಿ ಹೇಳಿಕೆ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಕನಕಪುರದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಬಗ್ಗೆ ಮಾಹಿತಿ ನೀಡಿದ ಅವರು, ನಾನು ಈಡಿ, ಸಿಬಿಐ ಪ್ರಕರಣವನ್ನು ಹಿಂಪಡೆಯಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಯತ್ನಾಳ್ ಹೇಳಿಕೆ ನೀಡಿದ ಕಾರಣ ನಾನು 100 ಕೋಟಿ ರೂ.ಗಳಿಗೆ ಮಾನಹಾನಿ ಪ್ರಕರಣ ದಾಖಲಿಸಿದ್ದೆ. ಇದಕ್ಕಾಗಿ 1 ಕೋಟಿ ರೂ.ಗಳಷ್ಟು ಶುಲ್ಕ ಠೇವಣಿಯನ್ನು ನ್ಯಾಯಾಲಯಕ್ಕೆ ಕಟ್ಟಿದ್ದೇನೆ ಎಂದು ಹೇಳಿದರು.
ಈ ಪ್ರಕರಣವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಅದು ವಜಾ ಆಗಿದೆ. ಹೀಗಾಗಿ ಇಂದು ನಾನು ಸಲ್ಲಿಸಿರುವ ದಾಖಲೆಗಳ ಧೃಢಪಡಿಸಬೇಕಿತ್ತು. ಹೀಗಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಿದ್ದೆ ಎಂದು ಶಿವಕುಮಾರ್ ತಿಳಿಸಿದರು.
ರಾಜಕೀಯದಲ್ಲಿ ಈ ರೀತಿ ಮಾನಹಾನಿ ಪ್ರಕರಣ ದಾಖಲಿಸಿರುವುದು ಇದೇ ಮೊದಲೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ಹಿಂದೆ ಮಾಧ್ಯಮವೊಂದರ ಮೇಲೆ ಈ ಪ್ರಕರಣ ದಾಖಲಿಸಿದ್ದೆ. ನಂತರ ಅವರ ಜತೆ ಒಪ್ಪಂದಕ್ಕೆ ಬಂದು ಅದನ್ನು ಹಿಂಪಡೆದೆ ಎಂದು ಹೇಳಿದರು.
ಆದರೆ ಈಗ ಯತ್ನಾಳ್ ಕೊಟ್ಟಿರುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ನಾನು ಬಿಜೆಪಿ ಜೊತೆ ಸೇರುತ್ತಿದ್ದೇನೆ, ಕೇಸ್ ವಾಪಸ್ ಪಡೆಯಲು ಬಿಜೆಪಿ ಮಂತ್ರಿಗಳನ್ನು ದುಂಬಾಲು ಬೀಳುತ್ತಿದ್ದೇನೆ ಎಂದರೆ ನನ್ನ ಕಾರ್ಯಕರ್ತರಿಗೆ ಯಾವ ಸಂದೇಶ ರವಾನೆಯಾಗುತ್ತದೆ? ನಾನು ಎಲ್ಲವನ್ನು ಅನುಭವಿಸಿ ಆಗಿದೆ. ಕನಕಪುರದ ಜನ ನನಗೆ ಮತ ಹಾಕಿ ಗೆಲ್ಲಿಸಿಯೂ ಆಗಿದೆ ಎಂದು ಶಿವಕುಮಾರ್ ತಿಳಿಸಿದರು.







