ನಾನು 'ಬಾಂಬೆ ಬಾಯ್ಸ್' ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ: ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಜು. 1: ‘ಬಾಂಬೆ ಬಾಯ್ಸ್’ ವಿಚಾರ ನಾನು ಪ್ರಸ್ತಾಪ ಮಾಡಿಲ್ಲ. ಪತ್ರಕರ್ತರ ಪ್ರಶ್ನೆಗೆ ‘ಕಾಂಗ್ರೆಸ್ ಅಶಿಸ್ತು ನಮ್ಮ ಪಕ್ಷದ ಮೇಲೂ ಬೀಸುತ್ತಿದೆ’ ಎಂದಷ್ಟೇ ಹೇಳಿದ್ದೆ' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ''ನನ್ನ ಹೇಳಿಕೆಯನ್ನು ಬಿಜೆಪಿಗೆ ಸೇರಿದ 17 ಮಂದಿ ಶಾಸಕರ ಜೊತೆ ಸೇರಿಸುವ ಪ್ರಯತ್ನ ನಡೆಯಿತು. ಕಾಂಗ್ರೆಸ್-ಜೆಡಿಎಸ್‍ನಿಂದ ನಮ್ಮ ಪಕ್ಷಕ್ಕೆ ಬಂದ ಶಾಸಕರಿಂದ ಅಶಿಸ್ತು ಆಗಿಲ್ಲ. ಅದರಿಂದ ಸರಕಾರ ಅಧಿಕಾರಕ್ಕೆ ಬಂದಿದೆ. ಅವರ ಬಗ್ಗೆ ಒಂದೇ ಒಂದು ಆಪಾದನೆ ಮಾಡಿಲ್ಲ'' ಎಂದರು.
‘ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ವರೆಗೆ ಯಾವುದೇ ಕಾರಣಕ್ಕೂ ವಿಶ್ರಾಂತಿ ಪಡೆಯುವುದಿಲ್ಲ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ. ಮೋಸಗಾರರಾದ ಕಾಂಗ್ರೆಸಿಗರನ್ನು ಬೆಂಬಲಿಸುವುದಿಲ್ಲ. ಬಿಜೆಪಿ ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ಸಿಗೆ ಕೇವಲ ಒಂದು ಸ್ಥಾನ ಮಾತ್ರ ಸಿಕ್ಕಿತ್ತು’ ಎಂದು ತಿಳಿಸಿದರು.
‘ಅಲ್ಲೊಬ್ಬರು, ಇಲ್ಲೊಬ್ಬರು ಪಕ್ಷದ ನಾಯಕರ ವಿರುದ್ಧ ಮಾತನಾಡುವುದು ಮತ್ತು ಆಪಾದನೆ ಮಾಡುವುದು ಸೂಕ್ತವಲ್ಲ ಎಂದು ಮುಖಂಡರು ಸೂಚಿಸಿದ್ದಾರೆ. ಬಿಜೆಪಿಯಲ್ಲಿ ಬಹಿರಂಗ ಹೇಳಿಕೆ ಕೊಡುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದಲ್ಲಿ ಇನ್ನು ಮುಂದೆ ಅಶಿಸ್ತು ಇರುವುದಿಲ್ಲ ಎಂಬ ವಿಶ್ವಾಸ ನಮಗೆಲ್ಲರಿಗೂ ಇದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರವು ಕೊಟ್ಟ ಆಶ್ವಾಸನೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಹೋರಾಟ ಮಾಡಲಿದೆ. ವಿಧಾನ ಮಂಡಲದ ಒಳಗೆ ನಮ್ಮ ಪಕ್ಷದ ಶಾಸಕರು, ಗಾಂಧಿ ಪ್ರತಿಮೆ ಮುಂದೆ ಯಡಿಯೂರಪ್ಪರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ ಅವರು, ‘ದ್ವೇಷದ ರಾಜಕಾರಣ ಮಾಡದಿರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.
‘ಚುನಾವಣೆ ಮುಗಿದ ಬಳಿಕ ಒಬ್ಬರ ಮೇಲೊಬ್ಬರು ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಹಿರಿಯರ ತಪಸ್ಸಿನ ಫಲ ಬಿಜೆಪಿ ಬೆಳವಣಿಗೆಯ ಹಿಂದಿದೆ. ಕಾಂಗ್ರೆಸ್ ಮೋಸದ ಗ್ಯಾರಂಟಿಯಿಂದ ಅವರಿಗೆ ಪ್ರಯೋಜನ ಲಭಿಸಿತು. ಚುನಾವಣೆ ಫಲಿತಾಂಶವನ್ನು ಕೆಟ್ಟ ಕನಸೆಂದು ಭಾವಿಸಿದ್ದೇವೆ. ಮೋದಿಜಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಲು 7 ತಂಡಗಳಾಗಿ ರಾಜ್ಯ ಪ್ರವಾಸ ಮಾಡಿದ್ದು, ಕಾರ್ಯಕರ್ತರ ಸಮಾವೇಶಗಳು ಯಶಸ್ವಿಯಾಗಿದೆ. ಒಂದೆರಡು ಕಡೆ ಸಣ್ಣಪುಟ್ಟ ಗೊಂದಲ ಉಂಟಾಗಿದೆ ಎಂದು ತಿಳಿಸಿದರು.







