ತೆರಿಗೆ ವಂಚನೆ ಆರೋಪ: ಬೆಂಗಳೂರಿನ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ

ಬೆಂಗಳೂರು: ತೆರಿಗೆ ವಂಚನೆ ಆರೋಪದ ಹಿನ್ನೆಲೆ, ಬೆಂಗಳೂರಿನ 10ಕ್ಕೂ ಹೆಚ್ಚು ಕಡೆಗಳಲ್ಲಿ ಖಾಸಗಿ ಕಂಪೆನಿಗಳು, ಅದರ ಮಾಲಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅ.3ರ ರಾತ್ರಿ ಚೆನ್ನೈ, ದಿಲ್ಲಿಯಿಂದ 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದಿದ್ದು, ಬುಧವಾರ(ಅ.4) ಬೆಳಗ್ಗೆ ಬೆಂಗಳೂರಿನ ವಿಜಯನಗರ, ಬಿಟಿಎಂ ಲೇಔಟ್, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದು, ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ತೆರಿಗೆ ವಂಚನೆಗೆ ಸಂಬಂಧಿಸಿದ ಆರೋಪದ ಮೇಲೆ ಬೆಂಗಳೂರಿನ ಮೇಕ್ರಿಸರ್ಕಲ್ ಬಳಿಯ ಗಜರಾಜ ಜ್ಯುವೆಲ್ಲರಿ ಶಾಪ್, ಪ್ರಶಾಂತನಗರದ ದಂತ ವೈದ್ಯೆಯೊಬ್ಬರ ಮನೆ, ಶಾಂತಿನಗರದ ಉದ್ಯಮಿ ನವೀನ್ ಎಂಬುವರ ಮನೆ ಸೇರಿದಂತೆ ವಿವಿಧ ಖಾಸಗಿ ಕಂಪೆನಿಗಳು ಅದರ ಮಾಲಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.





