‘ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ಕೊನೆಯ ಉಸಿರಿರುವವರೆಗೂ ಕೋಮುವಾದದ ವಿರುದ್ಧ ಹೋರಾಟ’: ಸಿಎಂ ಸಿದ್ದರಾಮಯ್ಯ

Photo credit : @INCKarnataka
ಬೆಂಗಳೂರು, ಮೇ 28: ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಹೇಳಿದರು.
ಲೋಕಭವನದಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನನಗೆ ಇನ್ನೂ ಎರಡು ವರ್ಷಗಳ ಅವಕಾಶ ಇದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಶಾಸಕಾಂಗ ಪಕ್ಷದ ಸಭೆ ಸೇರಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ” ಎಂದರು.
ನಾಯಕತ್ವ ಬದಲಾವಣೆ ಬಳಿಕ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುತ್ತೇನೆ” ಎಂದು ಸ್ಪಷ್ಟಪಡಿಸಿದರು.
“ನಾನು ಎಂದಿಗೂ ಕೋಮುವಾದ ರಾಜಕಾರಣ ಮಾಡುವುದಿಲ್ಲ” ಎಂದ ಅವರು, “ನನ್ನ ಕೊನೆಯ ಉಸಿರು ಇರುವವರೆಗೆ ಕೋಮುವಾದದ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನದ ಉಳಿವಿಗಾಗಿ ಹೋರಾಡುತ್ತೇನೆ” ಎಂದು ಹೇಳಿದರು.
ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಸಿದ್ದರಾಮಯ್ಯ, ರಾಜಕೀಯ ಜೀವನದುದ್ದಕ್ಕೂ ತಾವು ನಂಬಿದ ತತ್ವಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.






