ಮುಖ್ಯಮಂತ್ರಿ ಬದಲಾವಣೆ ಇದೀಗ ಅಪ್ರಸ್ತುತ: ಡಾ.ಜಿ. ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್ (PTI)
ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಿನ್ನೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕುರಿತು ಮಾತನಾಡಿದ್ದೇನೆ. ಇದರಲ್ಲಿ ಹೊಗಳುವುದು ಏನು ಬಂತು. ಸಿದ್ದರಾಮಯ್ಯ 16 ಬಜೆಟ್ ಕೊಟ್ಟಿದ್ದು ಸತ್ಯ ಅಲ್ಲವೇ? ಅವರು ರಾಜ್ಯದಲ್ಲಿ ಆರ್ಥಿಕ ಸಮನ್ವಯತೆ ಸಾಧಿಸಿದ್ದಾರೆ ಎಂದು ಹೇಳಿದ್ದೇನೆ ಅಷ್ಟೇ’ ಎಂದರು.
ಬಿಎಂಐಸಿ ಯೋಜನೆಯ ಸಮಸ್ಯೆ ಹಲವು ವರ್ಷಗಳಿಂದ ಬಗೆಹರಿದಿಲ್ಲ. ಸರಕಾರ ಯೋಜನೆಗೆ ಜಮೀನು ನೀಡಿದ್ದು, 300ಕ್ಕೂ ಹೆಚ್ಚು ಪ್ರಕರಣ ಕೋರ್ಟ್ನಲ್ಲಿದೆ. ಈ ಸಮಸ್ಯೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅರ್ಧಗಂಟೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಸಮಿತಿಯಲ್ಲಿ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್, ಡಾ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಸೇರಿ ಹಿರಿಯ ಸಚಿವರು ಸದಸ್ಯರಾಗಿದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಈ ಹಿಂದೆ ನೀಡಿದ್ದ ವರದಿಯನ್ನು ನಾವು ಅಧ್ಯಯನ ಮಾಡಿ ಬಿಎಂಐಸಿ ಯೋಜನೆಯ ಬಗ್ಗೆ ನಮ್ಮ ವರದಿ ನೀಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಸಂಪುಟ ಸಭೆಯಲ್ಲಿ ತೀರ್ಮಾನ:
‘ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ವರ್ಷವಾಗಲಿದೆ' ಎಂಬ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಸಂಪುಟ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಇದು ಜಟಿಲ ಎಂದು ನನಗೇನೂ ಕಾಣುತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.







