ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧೈರ್ಯವಿದ್ದರೆ ಜಿ.ಪಂ., ತಾ.ಪಂ. ಚುನಾವಣೆ ಘೋಷಿಸಿ: ಬಿ.ವೈ. ವಿಜಯೇಂದ್ರ ಸವಾಲು

ಬಿ.ವೈ. ವಿಜಯೇಂದ್ರ
ಹೊಸದಿಲ್ಲಿ: ‘ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧೈರ್ಯವಿದ್ದರೆ, ಗ್ಯಾರಂಟಿ ಯೋಜನೆಗಳ ಮೇಲೆ ವಿಶ್ವಾಸವಿದ್ದರೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಘೋಷಿಸಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸವಾಲು ಹಾಕಿದ್ದಾರೆ.
ಶನಿವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಂಟು ನೆಪ ಮುಂದಿಟ್ಟು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆಯನ್ನೂ ಮುಂದೂಡುತ್ತಿದ್ದೀರಿ. ವಾಸ್ತವಿಕ ಸತ್ಯ ಏನೆಂದರೆ, ರಾಜ್ಯದ ಮತದಾರರು ಇಂತಹ ಅಯೋಗ್ಯ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದರಿಂದ ಭ್ರಮನಿರಸನಗೊಂಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಸರಕಾರಿ ನೌಕರರಿಗೆ ಸಂಬಳ ಕೊಡಲು ಖಜಾನೆಯಲ್ಲಿ ದುಡ್ಡಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಯಾವುದೇ ರಾಜ್ಯ ಸರಕಾರವು, ಜನರಿಗೆ ಹೆಂಡ ಕುಡಿಸಿ ತನ್ನ ಬೊಕ್ಕಸಕ್ಕೆ ಹಣ ತರುವ ಪ್ರಯತ್ನ ನಡೆಸಿಲ್ಲ. ಆದರೆ, ಕಾಂಗ್ರೆಸ್ ಸರಕಾರ ಆ ಕೆಲಸಕ್ಕೆ ಮುಂದಾಗಿದೆ ಎಂದು ಅವರು ಆಕ್ಷೇಪಿಸಿದರು.
ನನ್ನ ಪ್ರಕಾರ ಎರಡೂವರೆ ವರ್ಷ ಪೂರೈಸಿದ್ದೇ ಈ ಸರಕಾರದ ಒಂದು ಸಾಧನೆ ಎಂಬಂತಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಸರಕಾರದಿಂದ ರಾಜ್ಯದ ಬಡವರು, ರೈತರಿಗೆ, ಯುವಜನರಿಗೆ ಯಾವುದೇ ರೀತಿ ನ್ಯಾಯ ಕೊಡುವುದರಲ್ಲಿ ಯಶಸ್ವಿ ಆಗಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಎರಡೂವರೆ ವರ್ಷಗಳಲ್ಲಿ ಜನರು ಬಳಸುವ ವಸ್ತುಗಳ ಬೆಲೆ ಏರಿಕೆಯನ್ನು ಯಾವ ರೀತಿ ಮಾಡುತ್ತಾ ಬಂದಿದ್ದಾರೆಂದು ಅವರು ಪ್ರಶ್ನಿಸಿದರು.







