ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವುದು ಕರ್ನಾಟಕದ ಗುರಿ : ಸಿಎಂ ಡಿ.ಕೆ.ಶಿವಕುಮಾರ್
"ಬೆಂಗಳೂರು ಟೆಕ್ ಸಮ್ಮಿಟ್" ಉದ್ಘಾಟನೆ

ಬೆಂಗಳೂರು : “ಉದ್ಯಮಗಳ ಬೆಳವಣಿಗೆಗೆ ಪೂರಕವಾದ ನೀತಿಗಳು, ಬಲಿಷ್ಠ ಸಂಶೋಧನಾ ಕೇಂದ್ರಗಳು, ಸಮೃದ್ಧವಾಗ ನವೋದ್ಯಮ ಪರಿಸರ ವ್ಯವಸ್ಥೆ, ಕೌಶಲ್ಯಯುತ ಮಾನವ ಸಂಪನ್ಮೂಲದೊಂದಿಗೆ ಕರ್ನಾಟಕ ರಾಜ್ಯವು ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವ ಗುರಿ ಹೊಂದಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಬಿಐಇಸಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ "ಬೆಂಗಳೂರು ಟೆಕ್ ಸಮ್ಮಿಟ್" ಅನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ಇಂದು ನಾವೆಲ್ಲರೂ ಜಗತ್ತಿನ ಬದಲಾವಣೆಗೆ ಪೂರಕವಾಗಿರುವ ಜ್ಞಾನದ ಶಕ್ತಿ, ಆಲೋಚನೆ, ಅನ್ವೇಷಣೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಬೆಂಗಳೂರು ವಿಶ್ವದ ಅತಿ ದೊಡ್ಡ ತಂತ್ರಜ್ಞಾನದ ಕ್ಲಸ್ಟರ್ ಗಳಲ್ಲಿ ಒಂದಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಪುನೀತ್ ಅವರು ನಮ್ಮ ದೇಶದಲ್ಲಿ ರಾಕೆಟ್ ಗಳನ್ನು ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದನ್ನು ಸ್ಮರಿಸಿದರು. ಅವರಿಗೆ ಒಂದು ವಿಚಾರ ಸ್ಮರಿಸಲು ಬಯಸುತ್ತೇನೆ. 1902ರಲ್ಲಿ ಏಷ್ಯಾದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ್ದು ನಮ್ಮ ರಾಜ್ಯದಲ್ಲಿ, ವಿದ್ಯುತ್ ಸಂಪರ್ಕ ಪಡೆದ ನಗರ ಎಂದರೆ ಬೆಂಗಳೂರು ಹಾಗೂ ಮೈಸೂರು. ಇದು ನಮ್ಮ ರಾಜ್ಯದ ಇತಿಹಾಸ” ಎಂದರು.
“ಅತ್ಯುತ್ತಮ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಆಧುನಿಕ ಕೈಗಾರಿಕೆ ಹಾಗೂ ತಂತ್ರಜ್ಞಾನಕ್ಕೆ ಕರ್ನಾಟಕ ಬುನಾದಿ ಹಾಕಿದೆ. ಜಾಗತಿಕ ಸಂಸ್ಥೆಗಳು ನಮ್ಮ ಮೇಲೆ ಅಪಾರ ವಿಶ್ವಾಸವನ್ನು ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನ ಮೂಲಕ ಭಾರತ ಗಳಿಸುವ ಪ್ರತಿ ಐದು ಡಾಲರ್‌ಗಳಲ್ಲಿ ಎರಡು ಡಾಲರ್ ಕರ್ನಾಟಕದಿಂದಲೇ ಬರುತ್ತಿದ್ದು, ಕಳೆದ ವರ್ಷ ಇದು ಅಂದಾಜು 173 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿತ್ತು. ಇದು ಅನೇಕ ರಾಷ್ಟ್ರಗಳ ಆರ್ಥಿಕತೆಗಿಂತ ಹೆಚ್ಚಾಗಿದೆ. ಕರ್ನಾಟಕ ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ” ಎಂದು ವಿವರಿಸಿದರು.
ಸಾವಿರಕ್ಕೂ ಹೆಚ್ಚು ಜಿಸಿಸಿಗಳಿಗೆ ಬೆಂಗಳೂರು ನೆಲೆ
“ಇದೇ ವಿಚಾರವನ್ನು ನಾನು ಪ್ರಧಾನಮಂತ್ರಿಗಳ ಜತೆಗೂ ಚರ್ಚೆ ಮಾಡಿದ್ದೆ. 2025-26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವು 9.4 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು (FDI) ಪಡೆದಿದ್ದು, ಇದು ಆ ಅವಧಿಯಲ್ಲಿ ಭಾರತದ ಒಟ್ಟು ಒಳಹರಿವಿನ ಶೇ. 26.7 ರಷ್ಟಿದೆ. 1,000ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಬೆಂಗಳೂರನ್ನು ತಮ್ಮ ನೆಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, 2025ರ ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಹೊಸ ಜಿಸಿಸಿಗಳು ರಾಜ್ಯಕ್ಕೆ 1 ಬಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆಯನ್ನು ತಂದಿವೆ” ಎಂದು ಮಾಹಿತಿ ನೀಡಿದರು.
“ಭಾರತದ ಅತ್ಯಂತ ಹೆಗ್ಗಳಿಕೆಯ ಸಾಧನೆಗಳನ್ನು ನಮ್ಮ ನೆಲದಲ್ಲಿ ಮಾಡಲಾಗಿದೆ. ಚಂದ್ರಯಾನ-3, ಐಐಐಟಿ-ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾದ ಡಿಜಿಟಲ್ ಗುರುತಿನ ವೇದಿಕೆ, ಬಯೋಕಾನ್‌ನ ಜಾಗತಿಕ ಔಷಧೀಯ ವ್ಯಾಪ್ತಿ ಮತ್ತು ಭಾರತದ ಸ್ವಂತ ಎಐ ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರು ಮೂಲದ 'ಸರ್ವಂ' (Sarvam) ಪಾತ್ರ ಮಹತ್ವಾದ್ದಾಗಿದೆ. ನಮ್ಮಲ್ಲಿ ತಂತ್ರಜ್ಞಾನವನ್ನು ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಬಳಕೆಯಾಗುವಂತೆ ರೂಪಿಸಲಾಗುತ್ತಿದೆ” ಎಂದರು.
ಕರ್ನಾಟಕದಲ್ಲಿ 24,000 ನವೋದ್ಯಮಗಳು:
“ತಂತ್ರಜ್ಞಾನದಲ್ಲಿ ಯಾರು ಮೊದಲು ಹೆಜ್ಜೆ ಇಡುತ್ತಾರೋ ಅವರು ಮುನ್ನಡೆ ಸಾಧಿಸುತ್ತಾರೆ. ಕರ್ನಾಟಕ ಸದಾ ಈ ವಿಚಾರದಲ್ಲಿ ಮುನ್ನಡೆ ಸಾಧಿಸಿದೆ. ನಮ್ಮ ರಾಜ್ಯ ದೇಶದಲ್ಲೇ ಮೊದಲ ಐಟಿ ನೀತಿಯನ್ನು 1997ರಲ್ಲೇ ರಚಿಸಿತು. 2001ರಲ್ಲಿ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಜೈವಿಕ ತಂತ್ರಜ್ಞಾನ ನೀತಿ ರಚಿಸಲಾಯಿತು. 2024ರಲ್ಲಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲಾಯಿತು. ಇದರೊಂದಿಗೆ ಕರ್ನಾಟಕ ಜಾಗತಿಕ ನಾಯಕತ್ವ ವಹಿಸಿದೆ” ಎಂದು ಹೇಳಿದರು.
“ಕರ್ನಾಟಕವು 24,000 ಅಧಿಕೃತ ನವೋದ್ಯಮಗಳ ನೆಲೆಯಾಗಿದೆ. ಪ್ರತಿ 5 ಭಾರತೀಯ ಪ್ರಮುಖ ಕಂಪನಿಗಳಲ್ಲಿ 2 ಕಂಪನಿಗಳು ಬೆಂಗಳೂರಿನಲ್ಲಿ ಆರಂಭವಾಗಿವೆ. ಜಾಗತಿಕ ನವೋದ್ಯಮ ವ್ಯವಸ್ಥೆಯಲ್ಲಿ ಕರ್ನಾಟಕ 8ನೇ ಸ್ಥಾನ ಹಾಗೂ ಏಷ್ಯಾದಲ್ಲಿ 2ನೇ ಸ್ಥಾನ ಪಡೆದಿದೆ. ಬೆಂಗಳೂರು 4.4 ಬಿಲಿಯನ್ ಡಾಲರ್ ತಂತ್ರಜ್ಞಾನ ಹೂಡಿಕೆಯನ್ನು ಆಕರ್ಷಿಸಿದ್ದು, ಇದು ದೇಶದ ನಂತರದ ಐದು ಪ್ರಮುಖ ನಗರಗಳು ಒಟ್ಟಾಗಿ ಸಂಗ್ರಹಿಸಿದ 4.8 ಬಿಲಿಯನ್ ಡಾಲರ್‌ಗೆ ಬಹುತೇಕ ಸಮನಾಗಿದೆ. ಕರ್ನಾಟಕದ ಸ್ಟಾರ್ಟ್‌ಅಪ್‌ಗಳು ಒಟ್ಟಾರೆಯಾಗಿ ಸುಮಾರು 79 ಬಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿದ್ದು, ಬೆಂಗಳೂರಿನ ಮಹಿಳಾ ಸಂಸ್ಥಾಪಕರು 13.4 ಬಿಲಿಯನ್ ಡಾಲರ್ ಹೂಡಿಕೆಯನ್ನು ಪಡೆದುಕೊಂಡಿದ್ದಾರೆ” ಎಂದರು.
ಎಲಿವೇಟ್ ಮೂಲಕ 1500 ನವೋದ್ಯಮಗಳಿಗೆ ಬೆಂಬಲ
“ನಮ್ಮ ಸರ್ಕಾರ ಎಲಿವೇಟ್ ಕಾರ್ಯಕ್ರಮದ ಮೂಲಕ 1500 ನವೋದ್ಯಮಗಳಿಗೆ ಅನುದಾನದ ಪ್ರೋತ್ಸಾಹ ನೀಡಿದ್ದು, 41 ಮಿಲಿಯನ್ ಡಾಲರ್ ನಷ್ಟು ಅನುದಾನ ನೀಡಲಾಗಿದೆ. ಸುಧಾರಿತ ವೈಜ್ಞಾನಿಕ ಮತ್ತು ಕೈಗಾರಿಕಾ ಪರಿಹಾರಗಳ ಮೇಲೆ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವು ವಿಶೇಷ ಬೆಂಬಲ ನೀಡುತ್ತಿದೆ. 2026ರಲ್ಲಿ 33 ಡೀಪ್ ಟೆಕ್ ನವೋದ್ಯಮಗಳಿಗೆ 30 ಕೋಟಿಯಷ್ಟು ಅನುದಾನದ ಪ್ರೋತ್ಸಾಹ ನೀಡಿದೆ. ಅನುದಾನಗಳು ನವೋದ್ಯಮಗಳ ಆರಂಭಕ್ಕೆ ನೆರವಾಗುತ್ತದೆ. ಆದರೆ ಅದರ ಬೆಳವಣಿಗೆ ಅನುದಾನಕ್ಕಿಂತ ಮೂಲಸೌಕರ್ಯ, ಪ್ರಯೋಗಾಲಯಗಳ ಅಗತ್ಯವಿದೆ. ಇದು ಒಬ್ಬರಿಂದಲೇ ನಿರ್ಮಾಣ ಅಸಾಧ್ಯ. ಪೇಟೆಂಟ್ ಬಂಡವಾಳ, ನೀತಿಗಳು ಇದಕ್ಕೆ ಉತ್ತೇಜನ ನೀಡಲಿದೆ” ಎಂದು ಹೇಳಿದರು.
ನಿಪುಣ ಕರ್ನಾಟಕ ಮೂಲಕ 33,000ಕ್ಕೂ ಹೆಚ್ಚು ಜನರಿಗೆ ಕೌಶಲ್ಯ ಮರುತರಬೇತಿ
“ಐಐಐಟಿ ರಾಯಚೂರಿನಲ್ಲಿ ಸ್ಥಾಪಿಸಲಾಗುವ ಹೆಚ್ಚುವರಿ ಉತ್ಕೃಷ್ಟತಾ ಕೇಂದ್ರವು (Centre of Excellence) ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ಉದ್ಯಮಗಳಿಗೆ ಪೂರಕವಾದ ಎಐ ಅನ್ವಯಿಕೆಗಳನ್ನು ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ವಿಸ್ತರಿಸಲಿದೆ. 300 ಕೋಟಿ ರೂ. ವೆಚ್ಚದ 'ನಿಪುಣ ಕರ್ನಾಟಕ' ಕೌಶಲ್ಯ ಮರುತರಬೇತಿ ಅಭಿಯಾನದ ಅಡಿಯಲ್ಲಿ, ಸರ್ಕಾರವು ರಾಜ್ಯದ ಉದ್ಯೋಗಿಗಳನ್ನು ಉದಯೋನ್ಮುಖ ತಂತ್ರಜ್ಞಾನದ ಅಗತ್ಯಗಳಿಗೆ ಸಜ್ಜುಗೊಳಿಸುತ್ತಿದೆ. ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳ ಸಹಭಾಗಿತ್ವದ ಮೂಲಕ, ವೃತ್ತಿಜೀವನದ ವಿರಾಮದ ನಂತರ ಮತ್ತೆ ಕೆಲಸಕ್ಕೆ ಮರಳುತ್ತಿರುವ ಮಹಿಳೆಯರು ಸೇರಿದಂತೆ 33,000ಕ್ಕೂ ಹೆಚ್ಚು ಜನರು ಈಗಾಗಲೇ ಉದ್ಯಮಕ್ಕೆ ಸಿದ್ಧರಾಗಿದ್ದಾರೆ” ಎಂದು ಮಾಹಿತಿ ನೀಡಿದರು.






