ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾ.ಪಂ.ಗಳ ಸೇರ್ಪಡೆ; ಸಿಎಂಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮಾ. 2: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾ-ಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ವಿರೋಧದ ಮಧ್ಯೆ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ಸರಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಜನಾಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಸಂಪುಟ ಸಭೆಯಲ್ಲಿ ಈ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದ್ದೇನೆ. ಜನತೆಯ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರರದು. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆಯೊಡ್ಡಬೇಕು ಎಂದು ಕೋರಿದ್ದಾರೆ.
ಈ ಎಲ್ಲ ಪಂಚಾಯಿತಿಗಳ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು, ರೈತ ಮುಖಂಡರು ಸೇರಿದಂತೆ ಅನೇಕರುವ ಈ ಬಗ್ಗೆ ಮನವಿ ಮಾಡಿದ್ದು, ಇವರೆಲ್ಲರೂ 70 ದಿನಗಳಿಂದ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿದ್ದು, ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರ ಬೇಡಿಕೆಗಳನ್ನು ಆಲಿಸಿದ್ದೇನೆ. ಈ ಬಗ್ಗೆ ರೈತ ಮುಖಂಡರಾದ ಸುನಂದಾ ಜಯರಾಮ್ ತಮಗೆ ನೀಡಿದ್ದ ಮನವಿ ಪತ್ರವನ್ನು ಲಗತ್ತಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಮದ್ದೂರು ನಗರಸಭೆ ವ್ಯಾಪ್ತಿಗೆ ಈ ಗ್ರಾಮಗಳನ್ನು ಸೇರಿಸಬಾರದು. ಈ ಜನವಿರೋಧಿ ನಿರ್ಧಾರವನ್ನು ಹಿಂಪಡೆಯಬೇಕು. ಸ್ಥಳೀಯರ ಮನವಿಗೆ ಮನ್ನಣೆ ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ. ಅಲ್ಲದೆ, ಜನತೆಯ ನಿರ್ಧಾರಕ್ಕೆ ವಿರುದ್ಧವಾಗಿ ಸರಕಾರ ನಡೆದುಕೊಳ್ಳುವುದು ಸರಿಯಲ್ಲ ಎಂದು ಅವರು ಒತ್ತಾಯಿಸಿದ್ದಾರೆ.
ಕೃಷಿ ಆಧರಿತ ಪ್ರದೇಶ: ಈ ಭಾಗದ ಎಲ್ಲ ಗ್ರಾಮಗಳು ಕೃಷಿ ಆಧರಿತವಾಗಿದ್ದು, ಸುಮಾರು 2ಸಾವಿರ ಎಕರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಾಗಿರುತ್ತದೆ ಎಂಬುದು ಗಮನಾರ್ಹ. ಭತ್ತ, ಕಬ್ಬು, ಹೂವು, ತರಕಾರಿ ಇನ್ನಿತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಪಶು ಸಾಕಾಣಿಕೆಯಲ್ಲಿ ರೈತಾಪಿ ಜನ ತೊಡಗಿಕೊಂಡಿದ್ದಾರೆ.
ಜತೆಗೆ ಗೆಜ್ಜಲಗೆರೆ ಗ್ರಾಮದಲ್ಲಿಯೇ ಮಂಡ್ಯ ಜಿಲ್ಲೆಯ ಹಾಲು ಉತ್ಪಾದನಾ ಮಂಡಳಿ(ಮನ್ಮುಲ್) ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಆಸ್ಪತ್ರೆ, ವಿದ್ಯಾಸಂಸ್ಥೆಗಳು ಸೇರಿ ಅನೇಕ ಮೂಲಸೌಕರ್ಯ ಸೇವೆಗಳು ಜನರಿಗೆ ಲಭ್ಯವಿವೆ. ಯಾವುದೇ ಮುನ್ಸೂಚನೆ ನೀಡದೇ ಸಾರ್ವಜನಿಕರ, ರೈತರ ಅಭಿಪ್ರಾಯವನ್ನು ಆಲಿಸಿದೇ, ಗ್ರಾಮ ಸಭೆಯನ್ನು ನಡೆಸದೆ ಸದರಿ ಗ್ರಾಮಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ನಿರ್ಣಯ ಮಾಡಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಜನತೆಯ ಹಿತದೃಷ್ಟಿಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಿರುವ ನಿರ್ಣಯವನ್ನು ಕೂಡಲೇ ವಾಪಸ್ ಪಡೆಯಬೇಕು. ತಾವು ಸ್ಥಳೀಯರ ಮನವಿಗೆ ಓಗೊಟ್ಟು ಅವರ ಪರವಾಗಿ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.






