‘ಹೃದಯಾಘಾತ’ ಪ್ರಕರಣಗಳ ಹೆಚ್ಚಳ | ಸರಕಾರಕ್ಕೆ ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ
ತಜ್ಞರ ವರದಿಯಲ್ಲಿ ಏನಿದೆ?

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ‘ಕೋವಿಡ್-19 ಲಸಿಕೆ’ಯಿಂದಲೇ ಹೃದಯಾಘಾತ ಸಂಭವಿಸುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲʼ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯ ವರದಿ ತಿಳಿಸಿದೆ.
ಶನಿವಾರ ತಜ್ಞರ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಿದೆ.
ಹೃದಯ ಸಂಬಂಧಿ ಕಾಯಿಲೆಗಳ ಹೆಚ್ಚಳಕ್ಕೆ ಜೀವನಶೈಲಿಯೇ ಮುಖ್ಯ ಕಾರಣ ಎಂದು ಅಧ್ಯಯನ ದೃಢಪಡಿಸಿದೆ. ಕೋವಿಡ್ ಸೋಂಕಿನ ಪೂರ್ವ ಅವಧಿಗೆ ಹೋಲಿಸಿದರೆ, 2025ರಲ್ಲಿ ಯುವ ಹೃದ್ರೋಗಿಗಳಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿವೆ. ಮಧುಮೇಹದ ಪ್ರಮಾಣವು 2019ರಲ್ಲಿ ಶೇ.13.9ರಷ್ಟು ಇದ್ದು, 2025ಕ್ಕೆ ಶೇ.20.5ಕ್ಕೆ ಏರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2019ರ ಪೂರ್ವದಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳು ಶೇ.13.9ರಷ್ಟು ಇತ್ತು.
ಆದರೆ 2025ರಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳು ಶೇ.17.6ಕ್ಕೆ ಹೆಚ್ಚಳವಾಗಿವೆ. ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆ 2019ರ ಪೂರ್ವದಲ್ಲಿ ಶೇ.38.1 ಇದ್ದರೆ, 2025ರಲ್ಲಿ ಶೇ.44.1ಕ್ಕೆ ಏರಿಕೆಯಾಗಿದೆ. ಧೂಮಪಾನಿಗಳ ಸಂಖ್ಯೆ 2019ರಲ್ಲಿ ಶೇ.48.8 ಇದ್ದು, 2025ರ ವೇಳೆಗೆ ಶೇ.51ಕ್ಕೆ ಹೆಚ್ಚಳವಾಗಿದೆ ಎಂದು ವರದಿಯು ತಿಳಿಸಿದೆ.
ಅಧ್ಯಯನಕ್ಕೆ ಒಳಪಡಿಸಿದ್ದ ಹತ್ತರಲ್ಲಿ ಸುಮಾರು ಒಂಭತ್ತು ಮಂದಿ ಪುರುಷರಾಗಿದ್ದಾರೆ. ಅರ್ಧದಷ್ಟು ಮಂದಿ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಶೇ.26.32 ರೋಗಿಗಳಲ್ಲಿ ಯಾವುದೇ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳು ಕಂಡು ಬಂದಿಲ್ಲ ಎಂಬುದು ವರದಿಯಲ್ಲಿ ತಿಳಿಸಿದೆ.
ಯುವಕರಲ್ಲಿ ಹೃದಯ ಕಾಯಿಲೆಯ ಹೆಚ್ಚಳಕ್ಕೆ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ಮತ್ತು ಕೊಲೆಸ್ಟ್ರಾಲ್ನಂತಹ ಸಾಂಪ್ರದಾಯಿಕ ಮತ್ತು ಗೊತ್ತಿರುವ ಅಪಾಯಕಾರಿ ಅಂಶಗಳೇ ಪ್ರಮುಖ ಕಾರಣವಾಗಿವೆ. ಕೋವಿಡ್-19 ಲಸಿಕೆಗಳು ಮತ್ತು ಹಠಾತ್ ಹೃದಯ ಸಾವುಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
ಅಧ್ಯಯನಕ್ಕೆ ಒಳಪಟ್ಟವರ ಜಿಲ್ಲಾವಾರು ಪ್ರಮಾಣ: ಬೆಂಗಳೂರಿನಿಂದ ಶೇ.47, ತುಮಕೂರು ಶೇ.8, ಮಂಡ್ಯ, ಕೋಲಾರ ಮತ್ತು ರಾಮನಗರ ತಲಾ ಶೇ.5, ಹಾಸನ ಶೇ.3 ಮತ್ತು ಕರ್ನಾಟಕದ ಇತರ ಜಿಲ್ಲೆಗಳಿಂದ ಒಟ್ಟು ಶೇ.22ರಷ್ಟು ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
‘ಕೋವಿಡ್-19 ಲಸಿಕೆ ಯುವಕರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂಬ ವ್ಯಾಪಕ ಚರ್ಚೆಯಾದ ಹಿನ್ನೆಲೆ ಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಲಾಗಿತ್ತು. ಎಪ್ರಿಲ್ ಮತ್ತು ಮೇ 2025ರ ಅವಧಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದ 251 ಹೃದ್ರೋಗಿಗಳ ಮೇಲೆ ಈ ಅಧ್ಯಯನ ನಡೆಸಿದೆ. ಅವರಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಂದಿ, 31ರಿಂದ 40 ವಯಸ್ಸಿನ 66 ಮಂದಿ ಮತ್ತು 41ರಿಂದ 45 ವಯಸ್ಸಿನ 172 ಹೃದ್ರೋಗಿಗಳಿದ್ದಾರೆ.
ಸಮಿತಿಯ ಶಿಫಾರಸುಗಳು
► ಯುವ ಜನರಲ್ಲಿ ಹಠಾತ್ ಹೃದಯಾಘಾತ ತಡೆಗಟ್ಟಲು ರಾಷ್ಟ್ರೀಯ ಹೃದಯ ಕಣ್ಗಾವಲು ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ
► ಕಾರಣಗಳಿಲ್ಲದ ಮರಣಗಳಿಗೆ ಕಡ್ಡಾಯ ಶವಪರೀಕ್ಷೆ ಜಾರಿಗೊಳಿಸಬೇಕು
► ಶಾಲಾ ಮಟ್ಟದಿಂದಲೇ (10ನೇ ತರಗತಿ ಅಥವಾ 15 ವರ್ಷದಿಂದ) ನಿಯಮಿತ ಹೃದಯರಕ್ತನಾಳದ ತಪಾಸಣೆಗಳನ್ನು ನಡೆಸಬೇಕು
► ದೈಹಿಕ ಚಟುವಟಿಕೆ, ಒಳ್ಳೆಯ ನಿದ್ರೆ, ಒತ್ತಡ ಕಡಿಮೆಗೊಳಿಸುವಿಕೆ ಮತ್ತು ಆರೋಗ್ಯಕರ ಆಹಾರವನ್ನು ಉತ್ತೇಜಿಸುವ ಜೀವನಶೈಲಿ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು
► ಕೋವಿಡ್-19ರ ದೀರ್ಘಕಾಲೀನ ಪರಿಣಾಮಗಳನ್ನು ತನಿಖೆ ಮಾಡಲು ಐಸಿಎಂಆರ್ ನೇತೃತ್ವದಲ್ಲಿ ದೊಡ್ಡ ಪ್ರಮಾಣದ, ಬಹು-ಕೇಂದ್ರ ಸಂಶೋಧನೆಯನ್ನು ಕೈಗೊಳ್ಳಬೇಕು
► ಆರಂಭಿಕ ಗುರುತಿಸುವಿಕೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ವ್ಯಾಪಕ ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಕೈಗೊಳ್ಳಬೇಕು.