ಹಿಂದಿ ಭಾಷೆಯ ರಾಜ್ಯಗಳಲ್ಲಿ ಸ್ಥಾನ ಹೆಚ್ಚಿಸುವುದು ಬಿಜೆಪಿಯ ಗುಪ್ತ ಅಜೆಂಡಾ: ಡಿ.ಕೆ. ಶಿವಕುಮಾರ್

ಡಿ.ಕೆ.ಶಿವಕುಮಾರ್ (File Photo)
ಬೆಂಗಳೂರು: ಉತ್ತರ ಭಾರತದ ಹಿಂದಿ ಭಾಷೆಯ ರಾಜ್ಯಗಳಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡು ದಕ್ಷಿಣದ ಧ್ವನಿ ಕ್ಷೀಣಿಸುವಂತೆ ಮಾಡುವುದು ಬಿಜೆಪಿಯ ಗುಪ್ತ ಅಜೆಂಡಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೇಂದ್ರ ಸರಕಾರದ ವಿವಾದಿತ ಮಸೂದೆಗೆ ಸೋಲು ಆಗಿರುವ ಕುರಿತು ರವಿವಾರ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆಯು ಕೇವಲ ಒಂದು ಮಾಯಾಜಾಲವಾಗಿದ್ದು, ಇದು ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಸುತ್ತಿರುವ ರಾಜಕೀಯ ಸರ್ಜಿಕಲ್ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ನಮ್ಮ ಧ್ವನಿ ಕ್ಷೀಣಿಸಿದರೆ ತೆರಿಗೆ ಹಣದ ಹಂಚಿಕೆಯಲ್ಲೂ ನಮಗೆ ಅನ್ಯಾಯವಾಗುತ್ತದೆ. ಇದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪುವುದಿಲ್ಲ. ನಾವು ಮಹಿಳಾ ಮೀಸಲಾತಿಯನ್ನು ಸ್ವಾಗತಿಸುತ್ತೇವೆ, ಆದರೆ ಅದರ ಹೆಸರಲ್ಲಿ ನಡೆಯುವ ಪ್ರಾದೇಶಿಕ ಅನ್ಯಾಯವನ್ನು ಬಲವಾಗಿ ವಿರೋಧಿಸುತ್ತೇವೆ. ನಮ್ಮ ರಾಜ್ಯದ ಹಿತಾಸಕ್ತಿ ಬಲಿ ಕೊಡಲು ನಾವು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಮೀಸಲಾತಿ ಎಂಬುದು ಮಹಿಳೆಯರ ಹಕ್ಕಾಗಬೇಕೇ ಹೊರತು, ದಕ್ಷಿಣ ಭಾರತವನ್ನು ಹತ್ತಿಕ್ಕುವ ಆಯುಧವಾಗಬಾರದು. ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರವು ತಕ್ಷಣವೇ ಮರುವಿಂಗಡಣೆಯ ಷರತ್ತನ್ನು ಕೈಬಿಟ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ದಕ್ಷಿಣ ಭಾರತದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವನ್ನು ಆಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳು ರಾಷ್ಟ್ರೀಯ ಹಿತಾಸಕ್ತಿಯಿಂದ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಆದರೆ, ಈಗ ಕೇಂದ್ರ ಸರಕಾರ ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚಿನ ಸಂಸತ್ ಸ್ಥಾನ ನೀಡಿ, ಜನಸಂಖ್ಯೆ ನಿಯಂತ್ರಿಸಿದ ನಮ್ಮಂತಹ ಪ್ರಗತಿಪರ ರಾಜ್ಯಗಳ ಪ್ರಾತಿನಿಧ್ಯ ಕುಗ್ಗಿಸಲು ಹೊರಟಿದೆ. ಇದು ಕನ್ನಡಿಗರ ಹಾಗೂ ಇಡೀ ದಕ್ಷಿಣ ಭಾರತೀಯರ ಸ್ವಾಭಿಮಾನಕ್ಕೆ ಎಸಗುತ್ತಿರುವ ದ್ರೋಹ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಗ್ಯಾರೆಂಟಿ ನೀಡುತ್ತದೆಯೇ?: ಡಿ.ಕೆ.ಶಿವಕುಮಾರ್
‘ಮಹಿಳಾ ಮೀಸಲಾತಿ ನೀಡಲು ಕ್ಷೇತ್ರ ಮರುವಿಂಗಡಣೆ ಆಗಲೇಬೇಕು ಎಂಬ ಹಠವೇಕೆ? ಈಗಿರುವ 543 ಕ್ಷೇತ್ರಗಳಲ್ಲೇ ಮೀಸಲಾತಿ ನೀಡಲು ನಿಮಗಿರುವ ತಡೆಯೇನು?. ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ ಇಳಿಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಕಾನೂನಾತ್ಮಕವಾಗಿ ಗ್ಯಾರೆಂಟಿ ನೀಡುತ್ತದೆಯೇ?’ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.






