ಡಿ.12ರಿಂದ ಅಂಚೆ ಸೇವಕರ ಅನಿರ್ಧಿಷ್ಟಾವಧಿ ಮುಷ್ಕರ

ಬೆಂಗಳೂರು: ಅಂಚೆ ಸೇವಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಡಿ.12ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ(ಎಐಜಿಡಿಎಸ್‍ಯು) ತಳಿಸಿದೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹದೇವಯ್ಯ, ಅಂಚೆ ಸೇವಕರಿಗೆ 8 ಗಂಟೆಗಳ ಕರ್ತವ್ಯ ಮತ್ತು ಪ್ರಯೋಜನಗಳೊಂದಿಗೆ ಗ್ರಾಮೀಣ ಅಂಚೆ ಸೇವಾ ನೌಕರರಿಗೆ ಸಿವಿಲ್ ನೌಕರರ ಸ್ಥಾನಮಾನ ನೀಡಬೇಕು. ಕಮಲೇಶ್ ಚಂದ್ರ ಸಮಿತಿಯ ಶಿಫಾರಸ್ಸಿನಂತೆ 12, 24 ಮತ್ತು 36 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮೂರು ಆರ್ಥಿಕ ಉನ್ನತೀಕರಣಗಳ ಅನುದಾನವನ್ನು ನೀಡಬೇಕು ಎಂದರು.
ಅಂಚೆ ಸೇವಾ ನೌಕರರಿಗೆ ಸೂಕ್ತ ವೈದ್ಯಕೀಯ ಸವಲತ್ತುಗಳನ್ನು ನೀಡಬೇಕು. ಕಮಲೇಶ್ ಚಂದ್ರ ಸಮಿತಿ ವರದಿಯ ಶಿಫಾರಸ್ಸಿನ ಅನ್ವಯ ವರ್ಷಕ್ಕೆ 30 ದಿನಗಳ ಗಳಿಕೆ ರಜೆಯನ್ನು ನೀಡಬೇಕು. ಬಳಸಿಕೊಳ್ಳದ ರಜೆಯನ್ನು 180 ದಿನಗಳವರೆಗೆ ಸಂಗ್ರಹಿಸಲು ಅನುಮತಿಯನ್ನು ನೀಡಬೇಕು. ನಿವೃತ್ತಿಯಲ್ಲಿರುವ ಅಂಚೆ ಸೇವಾ ನೌಕರರಿಗೆ ಅರ್ಧದಷ್ಟು ವೇತನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.





