ಭಾರತ ಹಿಂದೂ ರಾಷ್ಟ್ರವಾಗಿಲ್ಲ, ಆಗುವುದನ್ನೂ ಬಯಸುವುದಿಲ್ಲ : ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ನಟ ಕಿಶೋರ್ ಕುಮಾರ್ ತಿರುಗೇಟು

ನಟ ಕಿಶೋರ್ ಕುಮಾರ್
ಬೆಂಗಳೂರು : ನಮ್ಮದು ಹಿಂದೂ ರಾಷ್ಟ್ರವಲ್ಲ, ಆಗಲು ಕೂಡ ಬಯಸುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹಿಂದೂ ರಾಷ್ಟ್ರದ ಕುರಿತ ಹೇಳಿಕೆಗೆ ನಟ ಕಿಶೋರ್ ಕುಮಾರ್ ತಿರುಗೇಟು ನೀಡಿದ್ದಾರೆ.
142 ಕೋಟಿ ನಾಗರಿಕರು ಬಯಸಿದರೆ ನಾಳೆ ಬೆಳಿಗ್ಗೆಯೊಳಗೆ ಭಾರತ ಹಿಂದೂ ರಾಷ್ಟ್ರವಾಗಬಹುದು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಕುರಿತ ಸುದ್ದಿಯನ್ನು ಫೇಸ್ ಬುಕ್ನಲ್ಲಿ ಹಂಚಿಕೊಂಡ ನಟ ಕಿಶೋರ್ ಕುಮಾರ್, ಭಾಗವತ್ ಅವರೇ, ಇಂದು ಆ ನಿಮ್ಮ ನಾಳೆಯ ಮರುದಿನ, ನಮ್ಮದು ಹಿಂದೂ ರಾಷ್ಟ್ರವಾಗಿಲ್ಲ, ಆಗುವುದನ್ನೂ ಕೂಡ ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದರ ಬದಲು ಜನರನ್ನು ಕೋಮುವಾದದ ಆಧಾರದಲ್ಲಿ ವಿಭಜಿಸುವ ಇಂತಹ ಜನರ ಮಾತುಗಳನ್ನು ಕೇಳುತ್ತಾ ಹೋದರೆ, ನಾವು ಖಂಡಿತವಾಗಿಯೂ ಹಿಂದೂ ಅಲ್ಲ, ಖಾಯಂ ಹಿಂದುಳಿದ ರಾಷ್ಟ್ರವಾಗುತ್ತೇವೆ ಎಂದು ನಟ ಕಿಶೋರ್ ಕುಮಾರ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ 100 ವರ್ಷಗಳ ಸಂಘದ ಪ್ರಯಾಣ - ಹೊಸ ದಿಗಂತಗಳು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಹಿಂದೂ ರಾಷ್ಟ್ರದ ಕುರಿತು ಹೇಳಿಕೆಯನ್ನು ನೀಡಿದ್ದರು.





