ಇಂದಿರಾ ಲಂಕೇಶ್ ನಿಧನ

ಇಂದಿರಾ ಲಂಕೇಶ್
ಬೆಂಗಳೂರು : ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.
ಇವರು ಖ್ಯಾತ ಪತ್ರಕರ್ತೆ ಮತ್ತು ಚಿಂತಕಿ ದಿವಂಗತ ಗೌರಿ ಲಂಕೇಶ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಹಾಗೂ ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ತಾಯಿ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಂತಾಪ :
ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ ಎಂದು ತಿಳಿಸಿದ್ದಾರೆ.
ಸಾಹಿತ್ಯ, ಮಾಧ್ಯಮ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಪಿ. ಲಂಕೇಶ್ ಅವರು ಮಾಡಿರುವ ಸಾಧನೆಗಳ ಹಿಂದೆ ಇಂದಿರಾ ಲಂಕೇಶ್ ಅವರ ಮಹತ್ವದ ಬೆಂಬಲ ಮತ್ತು ಕೊಡುಗೆ ಇತ್ತು ಎನ್ನುವುದು ನಿಸ್ಸಂಶಯ. ಲಂಕೇಶ್ ಕುಟುಂಬದೊಂದಿಗೆ ದೀರ್ಘಕಾಲದ ಆತ್ಮೀಯ ಬಾಂಧವ್ಯ ಹೊಂದಿದ್ದ ನನಗೆ ಇಂದಿರಾ ಲಂಕೇಶ್ ಹಾಗೂ ಅವರ ಮಕ್ಕಳು ಅತ್ಯಂತ ಆತ್ಮೀಯರಾಗಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಸ್ವತಃ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದ ಇಂದಿರಾ ಲಂಕೇಶ್ ಅವರು ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಪುತ್ರಿ ಗೌರಿ ಲಂಕೇಶ್ ಅವರ ಹತ್ಯೆಯ ನಂತರ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಇಂದಿರಾ ಲಂಕೇಶ್ ಅವರ ಅಗಲಿಕೆಯ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.






