ಐನಾಕ್ಸ್‌ವಿಂಡ್ ಕಂಪೆನಿಯಿಂದ ಕುಷ್ಟಗಿ ತಾಲೂಕಿನಲ್ಲಿ 400 ಕೋಟಿ ರೂ.ಹೂಡಿಕೆ: ಎಂ.ಬಿ.ಪಾಟೀಲ್

ಬೆಂಗಳೂರು, ಅ.15: ಪವನ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ದೈತ್ಯಾಕಾರದ ಬ್ಲೇಡ್‍ಗಳು ಮತ್ತು ಗೋಪುರಗಳ ಉತ್ಪಾದನೆಗೆ ಹೆಸರಾಗಿರುವ ಐನಾಕ್ಸ್‌ವಿಂಡ್ ಕಂಪನಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಕೈಗಾರಿಕಾ ಪ್ರದೇಶದಲ್ಲಿ 400 ಕೋಟಿ ರೂ. ಬಂಡವಾಳ ಹೂಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾದ ಕಂಪನಿಯ ಕಾರ್ಪೊರೇಟ್ ತಂತ್ರಗಾರಿಕೆ ವಿಭಾಗದ ಅಧ್ಯಕ್ಷ ಸಂತೋಷ್ ಖೈರ್ನಾರ್ ಜೊತೆ ಅವರು ಮಾತುಕತೆ ನಡೆಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಐನಾಕ್ಸ್‌ವಿಂಡ್ ಕಂಪನಿಯ ಮಾಲಕರಾಗಿರುವ ದೇವಾಂಶ್ ಜೈನ್ ಅವರು ತಮ್ಮ ಕಂಪನಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೆ 70 ಎಕರೆ ಭೂಮಿ ಬೇಕು. ಅತ್ಯುತ್ತಮ ಮತ್ತು ವಿಶಾಲ ರಸ್ತೆಗಳು ಇಲ್ಲದ ಕಡೆ ಭೂಮಿ ಒದಗಿಸಿದರೆ ಬೃಹದಾಕಾರದ ಬ್ಲೇಡುಗಳು ಮತ್ತು ಗೋಪುರಗಳನ್ನು ಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಪತ್ರ ಬರೆದು ಕೋರಿದ್ದರು ಎಂದು ತಿಳಿಸಿದರು.
ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಗೆ ಒಲವು ತೋರಿತ್ತು. ಆದರೆ ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೈಗಾರಿಕಾ ಪ್ರದೇಶವಿಲ್ಲ. ಕಂಪನಿಯು ಎರಡು ಹಂತಗಳಲ್ಲಿ ಒಟ್ಟು 400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ತೀರ್ಮಾನಿಸಿದೆ. ಕುಷ್ಟಗಿ ತಾಲೂಕಿನಲ್ಲಿ ಈಗಾಗಲೇ ಇದ್ದ ಕೆಐಎಡಿಬಿ ಭೂಮಿಯನ್ನೆ ಈಗ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಐನಾಕ್ಸ್‌ವಿಂಡ್ ಕಂಪನಿಯು ಮೊದಲನೆಯ ಹಂತದಲ್ಲಿ 300 ಕೋಟಿ ರೂ. ಹೂಡಲಿದ್ದು ಬ್ಲೇಡುಗಳನ್ನು ತಯಾರಿಸಲಿದೆ. ಎರಡನೆಯ ಹಂತದಲ್ಲಿ 100 ಕೋಟಿ ರೂ. ಹೂಡಿಕೆಯೊಂದಿಗೆ ಗೋಪುರಗಳನ್ನು ಉತ್ಪಾದಿಸಲಿದೆ. ಈ ಯೋಜನೆಯಿಂದ ನೇರವಾಗಿ ಒಂದು ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕಂಪನಿಯು ಪವನ ವಿದ್ಯುತ್ ಕ್ಷೇತ್ರಕ್ಕೆ ಬೇಕಾಗುವ ಬಾನೆತ್ತರದ ಕಂಬಗಳನ್ನೂ ತಯಾರಿಸಲಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಹೊಸ ಕೈಗಾರಿಕಾ ನೀತಿಯ ಅನ್ವಯ ಕೊಡುವ ಎಲ್ಲ ಸೌಲಭ್ಯಗಳನ್ನೂ ಐನಾಕ್ಸ್‌ವಿಂಡ್ ಕಂಪನಿಗೂ ಕೊಡಲಾಗುವುದು. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೂ ಒಳ್ಳೆಯದಾಗಲಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ಬಕುಮಾರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.







