ರಾಜ್ಯದ ಒಂಬತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಪಾಸಣೆ, 275 ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ರಾಜ್ಯಾದ್ಯಂತ ಒಂಬತ್ತು ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು, ಇಲಾಖೆ ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘನೆ ಮಾಡುತ್ತಿದ್ದ 275 ವರ್ತಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 9.8 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಯಿಂದಲೇ ‘ಮಿಷನ್ ನಿಖರ' ಅಭಿಯಾನದ ಅಂಗವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಗಂಗಾವತಿ, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ತಪಾಸಣೆ ಆರಂಭಿಸಿದ್ದರು.
ಒಂಬತ್ತು ಮಾರುಕಟ್ಟೆಗಳಲ್ಲಿ ಒಟ್ಟು 711 ಅಂಗಡಿಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ತೂಕದಲ್ಲಿ ಮೋಸ, ದೋಷಪೂರಿತ ಯಂತ್ರಗಳ ಬಳಕೆ, ನಿಗದಿತ ಅವಧಿಯೊಳಗೆ ಇಲಾಖೆಯಿಂದ ತೂಕದ ಯಂತ್ರಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದಿರುವುದು, ಸತ್ಯಾಪನೆ ಪ್ರಮಾಣಪತ್ರವನ್ನು ತಮ್ಮ ಅಂಗಡಿಗಳಲ್ಲಿ ಪ್ರದರ್ಶನ ಮಾಡದಿರುವ 275 ವರ್ತಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಉಲ್ಲಂಘನೆಗಳಿಗಾಗಿ 9,80,000 ರೂಪಾಯಿಗಳ ದಂಡವನ್ನು ಈ ವರ್ತಕರಿಗೆ ವಿಧಿಸುವುದರ ಜೊತೆಗೆ ಇಲಾಖೆ ಅಧಿಕಾರಿಗಳು ದೋಷಪೂರಿತ ತೂಕದ ಯಂತ್ರಗಳು ಹಾಗೂ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.






