ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ತಪಾಸಣೆ: 24 ಘಟಕಗಳಿಗೆ ನೋಟಿಸ್

ಬೆಂಗಳೂರು : ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗವು ಗುರುವಾರ ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ವಿಶೇಷ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘನೆ ಪತ್ತೆಯಾದ 24 ಘಟಕಗಳಿಗೆ ನೋಟಿಸ್ ಜಾರಿ ಮಾಡಿದೆ.
ಇಲಾಖೆಯ ವತಿಯಿಂದ ಇಂದು ಒಟ್ಟು 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ 32 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಸರಕಾರಿ ಆಹಾರ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ತಪಾಸಣೆ ವೇಳೆ ಹಲವು ಘಟಕಗಳಲ್ಲಿ ಸ್ವಚ್ಛತೆಯ ಕೊರತೆ, ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ಲೇಬಲ್‍ಗಳಲ್ಲಿ ತಪ್ಪುಗಳು ಹಾಗೂ ಕೀಟ ನಿಯಂತ್ರಣ ಪ್ರಮಾಣಪತ್ರದ ಕೊರತೆ ಸೇರಿದಂತೆ ವಿವಿಧ ಲೋಪಗಳು ಪತ್ತೆಯಾಗಿವೆ.
ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳ ಮೂರು ಘಟಕಗಳಲ್ಲಿ ತಪ್ಪು ಲೇಬಲ್ ಹೊಂದಿದ್ದ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಅಸ್ವಚ್ಛ ಸ್ಥಿತಿಯಲ್ಲಿದ್ದ ಒಂದು ನೀರಿನ ಘಟಕವನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿಯುವ ನೀರಿನ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಜನರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ, ಅವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ ಇಂತಹ ತಪಾಸಣೆಗಳನ್ನು ಮುಂದೆಯೂ ನಿರಂತರವಾಗಿ ನಡೆಸಲಾಗುವುದು.
ಪ್ಯಾಕೇಜ್ಡ್ ಕುಡಿಯುವ ನೀರನ್ನು ಖರೀದಿಸುವಾಗ ಬಾಟಲಿಯ ಮೇಲಿನ ಎಫ್‍ಎಸ್‍ಎಸ್‍ಎಐ ಪರವಾನಗಿ ಸಂಖ್ಯೆ, ಐಎಸ್‍ಐ ಗುರುತು, ತಯಾರಿಕಾ ದಿನಾಂಕ ಹಾಗೂ ಬಾಟಲಿಯ ಸೀಲ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ನೀರಿನ ಗುಣಮಟ್ಟ ಅಥವಾ ಉತ್ಪನ್ನದ ಬಗ್ಗೆ ಅನುಮಾನವಿದ್ದಲ್ಲಿ ಆಹಾರ ಸುರಕ್ಷತೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.






