ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ತಡೆಯಲು 60 ಎಐ ಕ್ಯಾಮೆರಾ ಅಳವಡಿಕೆ: ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು- ಮೈಸೂರು ಹೆದ್ದಾರಿ- ಸಂಗ್ರಹ ಚಿತ್ರ
ಬೆಂಗಳೂರು, ಸೆ.6: ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಬೆಂಗಳೂರು–ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ತಡೆಯಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ 60 ಭದ್ರತಾ ಕ್ಯಾಮೆರಾಗಳ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಆರಂಭದಲ್ಲಿ 118 ಕಿಲೋಮೀಟರ್ ಉದ್ದಕ್ಕೂ ಪ್ರತಿ 10 ಕಿಲೋಮೀಟರ್ ದೂರಕ್ಕೆ ಒಂದು ಕ್ಯಾಮೆರಾವನ್ನು ಅಳವಡಿಸಲು ಯೋಜಿಸಲಾಗಿತ್ತು. ಇದೀಗ ಪ್ರತಿ 2 ಕಿಮೀಗೆ ಒಂದರಂತೆ 60 ಕ್ಯಾಮೆರಾಗಳ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.
ಈ ಹಿಂದೆಯೇ ಕ್ಯಾಮೆರಾಗಳ ಅಳವಡಿಸಲು ಚಿಂತನೆ ನಡೆಸಲಾಗಿತ್ತು. ಆದರೆ, ಹೆದ್ದಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಡಿಯಲ್ಲಿ ಬರುವುದರಿಂದ ಅವರೇ ಕ್ಯಾಮೆರಾಗಳ ಅಳವಡಿಸಲು ಮುಂದಾಗಿದ್ದಾರೆ. ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಟೆಂಡರ್ ಕರೆದು, ಕ್ಯಾಮೆರಾಗಳ ಅಳವಡಿಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದರು.
ಎಐ ಕ್ಯಾಮೆರಾಗಳು ಅನುಮತಿಸಲಾದ ಗರಿಷ್ಠ ವೇಗದ ಮಿತಿಯನ್ನು ದಾಟುವ ವಾಹನಗಳನ್ನು ಗುರುತಿಸುವುದಲ್ಲದೆ, ನಿರ್ಬಂಧಿತ ವಾಹನಗಳು-ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಪ್ರವೇಶವನ್ನೂ ಗುರುತಿಸುತ್ತದೆ. ಇದಲ್ಲದೆ, ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುವುದು, ಸೀಟ್ ಬೆಲ್ಟ್ ಧರಿಸದಿರುವುದು, ಒನ್ ವೇ ಅಲ್ಲಿ ಬರುವ ವಾಹನಗಳನ್ನು ಗುರ್ತಿಸಿ, ರೆಕಾರ್ಡ್ ಮಾಡಿಕೊಳ್ಳುತ್ತದೆ ಎಂದು ಅಲೋಕ್ ಕುಮಾರ್ ಹೇಳಿದರು.
ಬಳಿಕ ಸಂಚಾರ ನಿರ್ವಹಣಾ ಕೇಂದ್ರಗಳೊಂದಿಗೆ ಡೇಟಾವನ್ನು ಹಂಚಿಕೊಳ್ಳುತ್ತವೆ. ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧ ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಚಾಲಕರಿಗೆ ಇ-ಚಲನ್ಗಳನ್ನೂ ಕೂಡ ನೀಡಲಾಗುತ್ತದೆ. ವಾಹನ ಮಾಲೀಕರು ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು.







